ಕಾರ್ಕಳ: ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕಾದರೆ ಆರೋಗ್ಯ ಅತೀ ಮುಖ್ಯ. ಉತ್ತಮವಾದ ಪೌಷ್ಠಿಕಾಂಶಪುಳ್ಳ ಆಹಾರದ ಸೇವನೆಯಿಂದ ಮಹಿಳೆಯರ ಆರೋಗ್ಯ ಸುಸ್ಥತಿಯಲ್ಲಿರುತ್ತದೆ ಎಂದು ಹಿರ್ಗಾನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಶಮಾ ಸುಕುರ್ ಹೇಳಿದರು.
ಅವರು ಎಂಪಿಎಂ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಗಸ್ಟ್11 ರಂದು ಲೈಂಗಿಕ ಕಿರುಕುಳ ವಿರೋಧಿ ಸಮಿತಿ, ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಸಮಿತಿ ಮತ್ತು ಕಾಲೇಜಿನ ಆರೋಗ್ಯ ವೇದಿಕೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಮಹಿಳಾ ಆರೋಗ್ಯದ ಕುರಿತಾದ ಮಾಹಿತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಮಾಜದಲ್ಲಿ ಹಲವಾರು ರೀತಿಯ ದೌರ್ಜನ್ಯಗಳಾಗುತ್ತಿವೆ. ಈ ದೌರ್ಜನ್ಯಗಳ ಬಗ್ಗೆ ಮಹಿಳೆಯರು ಎಚ್ಚರಾಗಿರುವುದು ಅಗತ್ಯ. ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ಶಿಕ್ಷಣ ಹೊಂದಿರುವುದು ಅಗತ್ಯ.
ಒತ್ತಡ ಮುಕ್ತ ಮನಸ್ಥಿತಿಯೇ ನೆಮ್ಮದಿಯ ಜೀವನಕ್ಕೆ ಕಾರಣ, ಹಾಗಾಗಿ ಮಹಿಳೆಯರು ಒತ್ತಡಕ್ಕೊಳಗಾಗದೇ ನಿರಾಳವಾಗಿ, ಆರೋಗ್ಯವಂತರಾಗಿ ಬದುಕಿ ಸಾಧನೆ ಮಾಡಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಕಿರಣ್ ಮಾತನಾಡಿ, ಮಹಿಳೆಯರು ಸ್ವಾವಲಂಬಿಯಾಗಿ, ಆರೋಗ್ಯವಂತರಾಗಿ ಬದುಕಿದರೆ ಸಮಾಜದ ಏಳಿಗೆಯಾಗುತ್ತದೆ, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ ಮತ್ತು ಎಲ್ಲರಿಗೂ ಆದರ್ಶವಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ದೌರ್ಜನ್ಯ ಸಮಿತಿಯ ಸಂಚಾಲಕಿ, ಸಹಾಯಕ ಪ್ರಾಧ್ಯಾಪಕಿ ಭಾಗ್ಯಲಕ್ಷ್ಮಿ ಮಾತನಾಡಿ,ಮಹಿಳೆಯರು ಸುಶಿಕ್ಷಿತರಾದರೆ ಇಡೀ ಕುಟುಂಬದ, ಸಮಾಜದ ಪ್ರಗತಿಯಾಗುತ್ತದೆ. ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿಯೂ ಮಹಿಳೆ ಗುರುತಿಸಿಕೊಂಡಿದ್ದಾಳೆ. ಆದರೆ ಕೆಲವೊಂದು ಸಮಾಜಘಾತಕ ಶಕ್ತಿಗಳು ಹೆಣ್ಣಿನ ಕನಸುಗಳನ್ನು ನಾಶ ಮಾಡುತ್ತಿರುವುದು ದುರಂತ ಎಂದರು.
ವಾಣಿಜ್ಯ ವಿಭಾಗದ ಮುಖ್ಯಸ್ಥೆ ಸುಷ್ಮಾ, ಪ್ರಾಧ್ಯಾಪಕಿ ಜ್ಯೋತಿ ಶೆಟ್ಟಿ, ವಿದ್ಯಾರ್ಥಿ ಪ್ರತಿನಿಧಿ ಧನ್ಯಶ್ರೀ ಉಪಸ್ಥಿತರಿದ್ದರು.
ನಿವೇದಿತ ಕಾರ್ಯಕ್ರಮ ನಿರೂಪಿಸಿದರು, ವಿದ್ಯಾರ್ಥಿ ಪ್ರತಿನಿಧಿ ಮುಕ್ತಿ ವರ್ಧನ ಸ್ವಾಗತಿಸಿ, ಜಾಸ್ಮಿನ್ ವಂದಿಸಿದರು.












