ಉಡುಪಿ : ಪ್ರಸಕ್ತ ಸಾಲಿನ ಡಿ.ದೇವರಾಜ ಅರಸುರವರ 107ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಜಿಲ್ಲೆಗಳಲ್ಲಿ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿರುವ ವ್ಯಕ್ತಿ/ಸಂಘ ಸಂಸ್ಥೆಗಳಿಗೆ ಜಿಲ್ಲಾ ಮಟ್ಟದ ಡಿ ದೇವರಾಜ ಅರಸು ಪ್ರಶಸ್ತಿ ನೀಡಲು ಅರ್ಹರನ್ನು ಆಯ್ಕೆ ಮಾಡಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ.
ಈ ಪ್ರಶಸ್ತಿಗೆ ಅರ್ಹವಿರುವ ವ್ಯಕ್ತಿಯು ದೇವರಾಜ ಅರಸುರವರ ಧೇಯೋದ್ದೇಶಗಳನ್ನು ಹೊಂದಿದ್ದು, ಆ ನಿಟ್ಟಿನಲ್ಲಿ ಕಾರ್ಯ ನಿರತರಾಗಿರಬೇಕು. ದೇವರಾಜ ಅರಸುರವರು ಕಾರ್ಯಗತಗೊಳಿಸಿದ ಯೋಜನೆ/ ಕಾರ್ಯಕ್ರಮಗಳಲ್ಲಿ ಒಂದೆರೆಡರಲ್ಲಿಯಾದರೂ ಸ್ವಯಂ ಪ್ರೇರಣೆಯಿಂದ ತಮ್ಮನ್ನು ತೊಡಗಿಸಿಕೊಂಡು ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿರಬೇಕು. ಹಿಂದುಳಿದ ವರ್ಗಗಳನ್ನು ಸಂಘಟಿಸಿ ಅವರ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿರಬೇಕು ಹಾಗೂ ಮೀಸಲಾತಿ/ಶಿಕ್ಷಣ/ಸಾಮಾಜಿಕ ಪರಿವರ್ತನೆಗಾಗಿ ಶ್ರಮಿಸಿರಬೇಕು. ಹಿಂದುಳಿದ ವರ್ಗಗಳ ಶಿಕ್ಷಣ/ ಆರ್ಥಿಕ ಅಭಿವೃದ್ಧಿ, ಔದ್ಯೋಗಿಕ ಕ್ಷೇತ್ರಗಳಲ್ಲಿ ಕಾರ್ಯನಿರತನಾಗಿದ್ದು, ಈ ಸಂಬಂಧ ಅವರ ಕೊಡುಗೆ ರಾಜ್ಯ/ರಾಷ್ಟ್ರ ಮಟ್ಟದಲ್ಲಿಗುರುತಿಲ್ಪಟ್ಟಿರಬೇಕು. ಹಿಂದುಳಿದ ವರ್ಗಗಳ ಅತ್ಯಂತ ಹಿಂದುಳಿದ ಜನಾಂಗವನ್ನು ಮುಖ್ಯ ವಾಹಿನಿಗೆ ತರಲು ಪ್ರತ್ಯೇಕವಾಗಿ ಅಥವಾ ಪರೋಕ್ಷವಾಗಿ ಶ್ರಮಿಸುತ್ತಿರಬೇಕು.
ಪ್ರಶಸ್ತಿಗೆ ಆಯ್ಕೆಯಾದ ವ್ಯಕ್ತಿ, ಸಂಘ/ಸಂಸ್ಥೆಗಳಿಗೆ ರೂ.50,000/- ನಗದು ಹಾಗೂ ಫಲಕದೊಂದಿಗೆ ಪ್ರಶಸ್ತಿ ನೀಡಲಾಗುವುದು. ಅರ್ಜಿ ಸಲ್ಲಿಸಲು ಆಗಸ್ಟ್ 17 ಕೊನೆಯ ದಿನವಾಗಿದ್ದು, ಅರ್ಹ ಸಾಧಕರು ಮತ್ತು ಸಂಘ ಸಂಸ್ಥೆಗಳು ತಮ್ಮ ಅರ್ಜಿಗಳನ್ನು ನೇರವಾಗಿ ಅಥವಾ ಅವರ ಪರವಾಗಿ ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ಹಿಂದುಳಿದ ವರ್ಗಗಳ ಕಚೇರಿಗೆ ಸಲ್ಲಿಸುವಂತೆ ತಿಳಿಸಿದೆ.