42ರ ತಾಯಿ 24ರ ಮಗ; ಕೇರಳದ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ಪಾಸಾದ ಅಮ್ಮ-ಮಗ ಜೋಡಿಗೆ ಸೈ ಎಂದ ಜನ!!

ಮಲಪ್ಪುರಂ: ಪ್ರತಿ ವರ್ಷ ಪಬ್ಲಿಕ್ ಸರ್ವಿಸ್ ಕಮಿಷನ್ ನಲ್ಲಿ ತರಹೇವಾರಿ ಅರ್ಜಿದಾರರು ಪರೀಕ್ಷೆ ನೀಡಲು ಬರುತ್ತಿರುತ್ತಾರೆ. ಈ ಬಾರಿ ಅಮ್ಮ ಮಗನ ಅನನ್ಯ ಜೋಡಿಯೊಂದು ಪರೀಕ್ಷೆ ಬರೆದು ಪಾಸಾಗಿ ಸೈ ಎನಿಸಿಕೊಂಡಿದೆ. 42 ವರ್ಷದ ಬಿಂದು ಮತ್ತು 24 ವರ್ಷದ ವಿವೇಕ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯನ್ನು ಒಟ್ಟಿಗೆ ಬರೆದು ಜತೆಯಾಗಿಯೆ ಪಾಸಾಗಿದ್ದಾರೆ.

ಸಾಧನೆಯ ಬಗ್ಗೆ ಮಾತನಾಡಿದ ವಿವೇಕ್, ತಂದೆಯು ಎಲ್ಲಾ ಸೌಕರ್ಯಗಳನ್ನು ಕಲ್ಪಿಸಿದ್ದು, ತಾಯಿಯ ಸಹಾಯದಿಂದ ತಾನು ಇಲ್ಲಿಯವರೆಗೆ ಬರಲು ಸಾಧ್ಯವಾಯಿತು ಎಂದಿದ್ದಾರೆ.

“ನಾವು ಕೋಚಿಂಗ್ ತರಗತಿಗಳಿಗೆ ಒಟ್ಟಿಗೆ ಹೋಗಿದ್ದೆವು. ನನ್ನ ತಾಯಿ ನನ್ನನ್ನು ಇದಕ್ಕೆ ಕರೆತಂದರು ಮತ್ತು ನನ್ನ ತಂದೆ ನಮಗೆ ಎಲ್ಲಾ ಸೌಕರ್ಯಗಳನ್ನು ಏರ್ಪಡಿಸಿದರು. ನಮ್ಮ ಶಿಕ್ಷಕರಿಂದ ನಮಗೆ ಸಾಕಷ್ಟು ಪ್ರೇರಣೆ ಸಿಕ್ಕಿದೆ. ನಾವಿಬ್ಬರೂ ಒಟ್ಟಿಗೆ ಓದಿದ್ದೇವೆ ಆದರೆ ಒಟ್ಟಿಗೆ ಅರ್ಹತೆ ಪಡೆಯುತ್ತೇವೆ ಎಂದು ಎಂದಿಗೂ ಯೋಚಿಸಲಿಲ್ಲ. ನಾವಿಬ್ಬರೂ ತುಂಬಾ ಸಂತೋಷವಾಗಿದ್ದೇವೆ” ಎಂದು ವಿವೇಕ್ ಸುದ್ದಿ ಸಂಸ್ಥೆ ಎ.ಎನ್.ಐಗೆ ತಿಳಿಸಿದ್ದಾರೆ.

ಒಂಬತ್ತು ವರ್ಷಗಳ ಹಿಂದೆ ವಿವೇಕ್ 10 ನೇ ತರಗತಿಯಲ್ಲಿ ಓದುತ್ತಿದ್ದಾಗ ಮಗನನ್ನು ಓದಲು ಪ್ರೋತ್ಸಾಹಿಸಲು ಬಿಂದು ತಾನೂ ಕೂಡಾ ಪುಸ್ತಕಗಳನ್ನು ಓದಲು ಪ್ರಾರಂಭಿಸಿದಾಗ ಇದು ಪ್ರಾರಂಭವಾಗಿದೆ. ಈಗ ಅಮ್ಮ-ಮಗ ಒಟ್ಟಿಗೆ ಓದಿ, ಒಟ್ಟಿಗೆ ಪರೀಕ್ಷೆ ಬರೆದು ಒಟ್ಟಿಗೆ ಪಾಸಾಗಿರುವುದು ಎಲ್ಲರಿಗೂ ಮಾದರಿಯಾಗಿದೆ.