ಆಧುನಿಕ ಮಣಿಪಾಲದ ವಾಸ್ತುಶಿಲ್ಪಿ ಟಿ.ಮೋಹನದಾಸ್ ಎಂ.ಪೈ ಇನ್ನಿಲ್ಲ

ಡಾ.ಟಿ.ಎಂ.ಎ. ಪೈ ಫೌಂಡೇಶನ್ ಅಧ್ಯಕ್ಷ ಮತ್ತು ಉದಯವಾಣಿ ಪತ್ರಿಕೆಯನ್ನು ನಡೆಸುತ್ತಿರುವ ಮಣಿಪಾಲ್ ಮೀಡಿಯಾ ನೆಟ್‌ವರ್ಕ್‌ನ ಸಂಸ್ಥಾಪಕ ಟಿ.ಮೋಹನದಾಸ್ ಎಂ.ಪೈ, ದೀರ್ಘಕಾಲದ ಅನಾರೋಗ್ಯದಿಂದ ಭಾನುವಾರ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು.

89 ವರ್ಷದ ಪೈ ಅವರು ತಮ್ಮ ಸಹೋದರರಾದ ಟಿ.ರಾಮದಾಸ್ ಪೈ, ಟಿ.ನಾರಾಯಣ ಪೈ, ಟಿ.ಅಶೋಕ್ ಪೈ ಮತ್ತು ಸಹೋದರಿಯರಾದ ಆರ್.ವಸಂತಿ, ಜಯಂತಿ ಪೈ, ಇಂದುಮತಿ ಪೈ ಮತ್ತು ಆಶಾ ಪೈ ಅವರನ್ನು ಅಗಲಿದ್ದಾರೆ.

ಡಾ.ಟಿ.ಎಂ.ಎ. ಪೈ ಅವರ ಹಿರಿಯ ಪುತ್ರ , ಮೋಹನ್‌ದಾಸ್ ಪೈ ಅವರು ಆಧುನಿಕ ಮಣಿಪಾಲದ ವಾಸ್ತುಶಿಲ್ಪಿಯಾಗಿ ಜನಪ್ರಿಯರಾಗಿದ್ದರು. ಟಿ.ಎಂ.ಎ ಪೈ ಫೌಂಡೇಶನ್ ಮತ್ತು ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಜೊತೆಗೆ, ಅವರು ಎಂಜಿಎಂ ಕಾಲೇಜು ಟ್ರಸ್ಟ್ ಮತ್ತು ಐಸಿಡಿಎಸ್ ಲಿಮಿಟೆಡ್‌ನ ಮುಖ್ಯಸ್ಥರಾಗಿದ್ದರು.

ಕಲೆ ಮತ್ತು ಸಂಸ್ಕೃತಿಯ ಪ್ರೇಮಿ, ಮೋಹನ್‌ದಾಸ್ ಪೈ ಅವರು ರಾಷ್ಟ್ರಕವಿ ಗೋವಿಂದಪೈ ಸಂಶೋಧನಾ ಕೇಂದ್ರ, ಜಾನಪದ ಪ್ರದರ್ಶನ ಕಲೆಗಳ ಪ್ರಾದೇಶಿಕ ಸಂಪನ್ಮೂಲ ಕೇಂದ್ರ ಮತ್ತು ಎಂಜಿಎಂ ಯಕ್ಷಗಾನ ಕೇಂದ್ರವನ್ನು ಸ್ಥಾಪಿಸಿದರು. ಬಹುಸಂಸ್ಕೃತಿಯ ತಾಣವಾದ ಪಾರಂಪರಿಕ ಗ್ರಾಮವನ್ನು ನಿರ್ಮಿಸಲು ವಿಜಯನಾಥ ಶೆಣೈ ಅವರ ಜೊತೆಗೂಡಿದ್ದರು.

ಪಾರ್ಥಿವ ಶರೀರವನ್ನು ಸೋಮವಾರ ಬೆಳಗ್ಗೆ 9ರಿಂದ 11ರವರೆಗೆ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು.