ಕಾರ್ಕಳ: ಡಿ.ವಿ.ಜಿಯವರ ಬದುಕು ಮತ್ತು ಕಾವ್ಯಕ್ಕೆ ವ್ಯತ್ಯಾಸವಿಲ್ಲ. ನಡೆಯೇ ನುಡಿಯಾಗಿಸಿ ಗೌರವ ಪಡೆದುದಕ್ಕೆ ಸಾಕ್ಷಿ ಮಂಕುತಿಮ್ಮನ ಕಗ್ಗವಾಗಿದೆ ಎಂದು ಮುಂಡ್ಕೂರು ವಿದ್ಯಾವರ್ಧಕ ಪಿಯು ಕಾಲೇಜಿನ ಕನ್ನಡ ಅಧ್ಯಾಪಕ ಪ್ರಭಾಕರ ಕೊಂಡಳ್ಳಿ ಹೇಳಿದರು.
ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಶ್ರೀಮಹಾಗಣಪತಿ ದೇವಾಸ್ಥಾನ ಗಣಿತನಗರ ಹಾಗೂ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಸಹಯೋಗದೊಂದಿಗೆ ನಡೆದುಕೊಂಡು ಬರುತ್ತಿರುವ ಮೌಲ್ಯ ಸುಧಾ–ತಿಂಗಳ ಸರಣಿಯ ಎರಡನೆಯ ಕಾರ್ಯಕ್ರಮ ಕಗ್ಗದ ಬೆಳಕು ಎಂಬ ವಿಷಯದ ಕುರಿತಂತೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ತಂತ್ರಜ್ಞಾನವನ್ನು ಹಣಕೊಟ್ಟು ಕೊಂಡುಕೊಳ್ಳಬಹುದು. ಆದರೆ ಸಮಾಜವನ್ನು ನಾವೇ ಬೆಳೆಸಿಕೊಳ್ಳಬೇಕು. ಭಾವನೆಗಳಿಲ್ಲದೆ ಬದುಕು ಇಲ್ಲ. ಇರುವ ಕೆಲಸವ ಮಾಡುಕಿರಿದೆನದೆ ಮನವಿಟ್ಟು ಎಂದವರು ಡಿವಿಜಿ. ಡಿವಿಜಿಯವರ ಬದುಕೇ ಪ್ರೇರಣಾದಾಯಕ, ಸಾಹಸಗಾಥೆಯಾಗಿದೆ. ಕಗ್ಗದ ಮೂಲಕ ಜೀವನ ದರ್ಶನವನ್ನೆ ಮಾಡಿಕೊಟ್ಟಿದ್ದಾರೆ, ಬದುಕಿನ ಮಾರ್ಗದರ್ಶಿ ಸೂತ್ರವನ್ನು ನೀಡಿದ್ದಾರೆ ಎಂದು ಅನೇಕ ಕಗ್ಗವನ್ನು ಉದಾಹರಿಸಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರಶೆಟ್ಟಿ, ಆಡಳಿತ ಮಂಡಳಿ ಸದಸ್ಯ ಶಾಂತಿರಾಜ್ ಹೆಗ್ಡೆ, ಅನಿಲ್ ಕುಮಾರ್ ಜೈನ್, ಕಾರ್ಕಳ ಜ್ಞಾನಸುಧಾ ಪಿಯು ಪ್ರಿನ್ಸಿಪಾಲ್ ದಿನೇಶ್.ಎಂ.ಕೊಡವೂರ್, ಉಪಪ್ರಾಂಶುಪಾಲ ಸಾಹಿತ್ಯ, ಡೀನ್ ಅಕಾಡೆಮಿಕ್ಸ್ ಮಿಥುನ್.ಯು, ಜ್ಞಾನಸುಧಾ ಹೈಸ್ಕೂಲ್ ಪ್ರಿನ್ಸಿಪಾಲ್ ಉಷಾರಾವ್ ಯು, ವೈಸ್ ಪ್ರಿನ್ಸಿಪಾಲ್ ವಾಣಿ.ಕೆ, ಪಿ.ಆರ್.ಒ ಜ್ಯೋತಿ ಪದ್ಮನಾಭ ಭಂಡಿ, ಕೌನ್ಸಿಲರ್ ಡಾ.ಪ್ರಸನ್ನ ಹೆಗ್ಡೆ, ರೋ.ಸುರೇಂದ್ರ ನಾಯಕ್ ಉಪಸ್ಥಿತರಿದ್ದರು.
ಉಪನ್ಯಾಸಕ ವಿನಯಚಂದ್ರ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ವಂದಿಸಿದರು.