ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಪ್ರಸಿದ್ಧಿ ಪಡೆದಿರುವ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಪಾಲುದಾರ ಸಂಸ್ಥೆಯಾದ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯಲ್ಲಿ ಇಂದು “ವಿಶ್ವ ಯುವ ಕೌಶಲ್ಯ ದಿನ”ವನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಸ್ಥಾಪಕ ಪ್ರೇಮ್ ಪ್ರಸಾದ್ ಶೆಟ್ಟಿ, “ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಭಾರತ ಹೊರಹೊಮ್ಮುತ್ತಿರುವ ಈ ಕಾಲಘಟ್ಟದಲ್ಲಿ ದೇಶದ ಯುವ ಶಕ್ತಿಯನ್ನು ಕೌಶಲ್ಯ ಭರಿತರನ್ನಾಗಿಸುವ ಸವಾಲು ನಮ್ಮೆಲ್ಲರ ಮೇಲಿದೆ. ಇಲ್ಲದೇ ಹೋದಲ್ಲಿ ಈ ಯುವ ಶಕ್ತಿಯು ನಿರುದ್ಯೋಗ, ಅಸಾಮಾಜಿಕ ಕೃತ್ಯಗಳಿಗೆ ಬಲಿಯಾಗುವ ಅಪಾಯ ನಮ್ಮ ಮುಂದಿದೆ.
ಈ ಅತಿ ಗಂಭೀರ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಕೌಶಲ್ಯ ಶಿಕ್ಷಣದ ಮೂಲಕ ಯುವ ಜನತೆಗೆ ಭವಿಷ್ಯ ನಿರ್ಮಿಸಲು ಕಾರ್ಯತತ್ಪರವಾಗಿದೆ” ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯು ಉಡುಪಿ ಜಿಲ್ಲೆಯ ಆಯ್ದ 60 ಯುವಕ-ಯುವತಿಯರಿಗೆ ಉತ್ತಮ ಉದ್ಯೋಗವಕಾಶವಿರುವ
ಬಿ ಎಫ್ ಎಸ್ ಐ (ಬ್ಯಾಂಕಿಂಗ್, ಫೈನಾನ್ಶಿಯಲ್ ಸರ್ವೀಸ್) ಕ್ಷೇತ್ರದಲ್ಲಿ ಇಂದಿನ ಅಗತ್ಯತೆಗಳಾದ ಕೆ ವೈ ಸಿ, ಎಎಂಎಲ್, ಕಸ್ಟಮರ್ ಸರ್ವೀಸ್, ಡಿಜಿಟಲ್ ಬ್ಯಾಂಕಿಂಗ್ ವಿಷಯಗಳಲ್ಲಿ ಸಂಪೂರ್ಣ ಉಚಿತ ತರಬೇತಿ ನೀಡಿ, ಆ ನಂತರ ಅವರಿಗೆ ಉದ್ಯೋಗ ಮೇಳದ ಮೂಲಕ ಉದ್ಯೋಗ ಸೃಷ್ಠಿಸುವ ಯೋಜನೆಯನ್ನು ಜಾರಿಗೊಳಿಸುತ್ತಿದೆ.ಈ ತರಬೇತಿಯನ್ನು ಬ್ಯಾಂಕಿಂಗ್ ಹಾಗೂ ಫೈನಾನ್ಶಿಯಲ್ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದ ತಜ್ಞರಿಂದ ಎರಡು ತಿಂಗಳು ಪ್ರಾಯೋಗಿಕ ಕಲಿಕೆಯೊಂದಿಗೆ ತರಬೇತಿ ನೀಡಲಾಗುವುದು. ಈ ತರಬೇತಿಯ ನಂತರ ಅಭ್ಯರ್ಥಿಗಳಿಗೆ ಉದ್ಯೋಗ ಮೇಳವನ್ನು ಆಯೋಜಿಸಿ ಉದ್ಯೋಗ ದೊರಕಿಸುವ ಯೋಜನೆ ಜಾರಿಗೊಳಿಸುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅಭ್ಯರ್ಥಿಗಳಿಗೆ ಈ ಯೋಜನೆಯನ್ನು ವಿಸ್ತರಿಸಲು ಸಂಸ್ಥೆಯು ಕಾರ್ಯಕ್ರಮ ರೂಪಿಸಿದೆ.
ಕಾರ್ಯಕ್ರಮದಲ್ಲಿ ಮಣಿಪಾಲ್ ಬ್ಯುಸಿನೆಸ್ ಸೊಲ್ಯೂಷನ್ ನ ಹಿರಿಯ ಆಪರೇಷನ್ಸ್ ಮ್ಯಾನೇಜರ್ ಶ್ರೀಮತಿ ಆರತಿ, ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಪೌರ್ಣಮಿ ಪ್ರೇಮ್ ಶೆಟ್ಟಿ, ಸಿಬ್ಬಂದಿ ಹಾಗೂ ಈ ತರಬೇತಿ ಪಡೆಯಲು ನೋಂದಾಯಿಸಿರುವ ಜಿಲ್ಲೆಯ ಅಭ್ಯರ್ಥಿಗಳು ಉಪಸ್ಥಿತರಿದ್ದರು.