ಉಡುಪಿ: ಜುಲೈ 25 ರ ನಂತರ ಜಿಲ್ಲೆಯಾದ್ಯಂತ ಕಾರ್ಮಿಕರ ಇ-ಶ್ರಮ್ ನೋಂದಣಿ ಮತ್ತು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯ ಪಿಂಚಣಿ ಯೋಜನೆಗೆ ಸೇರ್ಪಡೆ ಮಾಡುವ ಕುರಿತಂತೆ ನಿರಂತರವಾಗಿ ಶಿಬಿರಗಳನ್ನು ಆಯೋಜಿಸಿ, ಅರ್ಹ ಕಾರ್ಮಿಕರನ್ನು ನೋಂದಣಿ ಮಾಡಲು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಹಾಗೂ ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆ ಕುರಿತು ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಸೂಚಿಸಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಯಲ್ಲಿ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ ಹಾಗೂ ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ಡೇಟಾಬೇಸ್ ಇ-ಶ್ರಮ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 18-40 ವರ್ಷದೊಳಗಿನ ವಿವಿಧ ವೃತ್ತಿಗಳಲ್ಲಿ ತೊಡಗಿರುವ ಅಸಂಘಟಿತ ಕಾರ್ಮಿಕರನ್ನು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯ ಪಿಂಚಣಿ ಯೋಜನೆಯ ವ್ಯಾಪ್ತಿಗೆ ಸೇರ್ಪಡೆ ಮಾಡುವ ಕುರಿತಂತೆ ಅಸಂಘಟಿತ ಕಾರ್ಮಿಕರ ವೃತ್ತಿವಾರು ಸಂಘಗಳೊಂದಿಗೆ ಸಮಾಲೋಚನೆ ನಡೆಸಿ, ಸ್ಥಳ ಮತ್ತು ದಿನಾಂಕವನ್ನು ನಿಗದಿಪಡಿಸಿಕೊಂಡು ಕಾರ್ಯಕ್ರಮ ಆಯೋಜಿಸಿ, ಎಲ್ಲಾ ಕಾರ್ಮಿಕರಿಗೆ ಈ ಯೋಜನೆಯ ಪ್ರಯೋಜನಗಳ ಕುರಿತು ಅರಿವು ಮೂಡಿಸಿ, ಸ್ಥಳದಲ್ಲೇ ನೋಂದಣಿ ಮಾಡಿಸಲು ನಿರ್ದೇಶನ ನೀಡಿದರು.
ಪಿಂಚಣಿ ಯೋಜನೆ ಹಾಗೂ ಇ-ಶ್ರಮ್ನಲ್ಲಿ ನೋಂದಾಯಿಸಿಕೊಳ್ಳಲು ಕಾರ್ಮಿಕರು ಶಿಬಿರಗಳಲ್ಲಿ ಮಾತ್ರವಲ್ಲದೇ ತಮ್ಮ ಸಮೀಪದ ಕಾಮನ್ ಸರ್ವೀಸ್ ಸೆಂಟರ್ಗಳಲ್ಲೂ ಸಹ ನೋಂದಾಯಿಸಬಹುದಾಗಿದೆ.
ಅಸಂಘಟಿತ ಕಾರ್ಮಿಕ ವಲಯದಲ್ಲಿನ ಬೀದಿ ಬದಿ ವ್ಯಾಪಾರಿಗಳು, ಹಮಾಲಿಗಳು, ಮನೆ ಕೆಲಸ ಮಾಡುವವರು, ರಿಕ್ಷಾ ಚಾಲಕರು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಗೃಹ ಆಧಾರಿತ ಕಾರ್ಮಿಕರು ಸೇರಿದಂತೆ ಇತರೆ ವಿವಿಧ ವೃತ್ತಿಯಲ್ಲಿರುವವರು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯ ಪಿಂಚಣಿ ಯೋಜನೆಯಲ್ಲಿ ಸೇರ್ಪಡೆಯಾಗುವ ಮೂಲಕ 60 ವರ್ಷದ ನಂತರ ಕನಿಷ್ಠ 3000 ರೂ. ಖಚಿತ ಮಾಸಿಕ ಪಿಂಚಣಿ ಪಡೆಯಲು ಸಾಧ್ಯವಾಗಲಿದೆ.
ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್, ವಿವಿಧ ಅನುಷ್ಠಾನಾಧಿಕಾರಿಗಳು ಹಾಗೂ ಅಸಂಘಟಿತ ಕಾರ್ಮಿಕ ವಲಯದ ವಿವಿಧ ವೃತ್ತಿಗಳ ನಾಮ ನಿರ್ದೇಶಿತ ಸದಸ್ಯರುಗಳು ಉಪಸ್ಥಿತರಿದ್ದರು.