ಉಡುಪಿ, ಮೇ 7: ಬಸವಣ್ಣ ನವರ ಕಾಯಕವೇ ಕೈಲಾಸ ಸಂದೇಶ ಎಲ್ಲರಿಗೂ ಸ್ಪೂರ್ತಿಯಾಗಬೇಕು, ಸರಕಾರಿ ಅಧಿಕಾರಿ, ಸಿಬ್ಬಂದಿಗಳೂ ಸಹ ತಮ್ಮ ದಿನನಿತ್ಯದ ಕೆಲಸದಲ್ಲಿ ಬಸವಣ್ಣನವರ ಸಂದೇಶಗಳನ್ನು ಅಳವಡಿಸಿಕೊಂಡು ಸಾರ್ವಜನಿಕರ ಕೆಲಸಗಳನ್ನು ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ತಿಳಿಸಿದ್ದಾರೆ.
ಅವರು ಮಂಗಳವಾರ, ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಬಸವ ಜಯಂತಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಬಸವಣ್ಣನವರ ವಚನಗಳನ್ನು ತಿಳಿಯದವರೇ ಇಲ್ಲ , ಅವರ ವಚನಗಳಲ್ಲಿನ ಸಂದೇಶಗಳು ಪ್ರತಿಯೊಬ್ಬರಿಗೂ ಸ್ಪೂರ್ತಿ ನೀಡುತ್ತವೆ, ಹೊರರಾಜ್ಯದಿಂದ ಕರ್ನಾಟಕ್ಕೆ ಬಂದ ತಾನೂ ಸಹ ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಸಂದೇಶದಿಂದ ಸ್ಪೂರ್ತಿ ಪಡೆದಿದ್ದೇನೆ, ಬಸವಣ್ಣ ನವರ ಬಸವ ತತ್ವಗಳು ಪ್ರಚಾರಗೊಂಡ ಜಿಲ್ಲೆಯಲ್ಲಿ ತಾನು ಕರ್ತವ್ಯ ನಿರ್ವಹಿಸಿದ್ದು, ಅಲ್ಲಿನ ಗ್ರಾಮಗಳಲ್ಲಿ ಜನತೆ ಸಹ ಬಸವಣ್ಣನವರ ವಚನಗಳಿಂದ ಪ್ರೇರಣೆಗೊಂಡಿರುವುದನ್ನು ಗಮನಿಸಿದ್ದೇನೆ, ಅನುಭವವೇ ಗುರು ಮತ್ತು ಕಾಯಕವೇ ಕೈಲಾಸ ಎಂಬ ಸಂದೇಶ ಸೇರಿದಂತೆ ಬಸವಣ್ಣ ನವರ ಪ್ರತಿಯೊಂದು ಸಂದೇಶಗಳು ಸದಾ ಕಾಲಕ್ಕೂ ಪ್ರಸ್ತುತ ಎಂದು ಹೆಪ್ಸಿಬಾ ರಾಣಿ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧೂ ಬಿ ರೂಪೇಶ್ ಮಾತನಾಡಿ, ಕರ್ನಾಟವು ಅನೇಕ ಮಹಾ ಪುರುಷರನ್ನು ವಿಶ್ವಕ್ಕೆ ನೀಡಿದೆ ಅದರಲ್ಲಿ ಬಸವಣ್ಣ ನವರು ಪ್ರಮುಖರು, ಎಲ್ಲರಿಗೂ ತಿಳಿಯುವಂತೆ ಅತ್ಯಂತ ಸರಳ ಭಾಷೆಯಲ್ಲಿ ಅವರ ರಚನೆಯ ವಚನಗಳು ಎಲ್ಲರನ್ನೂ ಒಳಗೊಳ್ಳುವ ಸಂದೇಶಗಳಿಂದ ಕೂಡಿದೆ, 12 ನೇ ಶತಮಾನದಲ್ಲಿ ರಚಿಸಿದ ಅವರ ವಚನಗಳು ಇಂದಿಗೂ ಪ್ರಸ್ತುತ, ನಾವು ಇಂದು ಎಷ್ಠೇ ಮುಂದುವರೆದಿದ್ದರೂ ಇನ್ನೂ ನಮ್ಮಲ್ಲಿ ಜಾತೀಯತೆಯ ವ್ಯವಸ್ಥೆ ಇನ್ನೂ ಇದೆ ಈ ಬಗ್ಗೆ ಬಸವಣ್ಣವನರು ನೀಡಿದ ಸಾಮಾಜಿಕ ಸಂದೇಶ ಇಂದಿಗೂ ಪ್ರಸ್ತುತ, ಬಸವಣ್ಣವರು ನೀಡಿದ ಸಂದೇಶಗಳು, ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ಇದನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಷಾ ಜೇಮ್ಸ್ ಮಾತನಾಡಿ, ಬವಸಣ್ಣ ನವರು ಆರಂಭಿಸಿದ ಅನುಭವ ಮಂಟಪ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂಸತ್ ಗೆ ಮಾದರಿಯಾಗಿದೆ, ಅವರ ವಚನಗಳಲ್ಲಿನ ಸಂದೇಶಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಬಸವ ಸಮಿತಿಯ ಅಧ್ಯಕ್ಷ ಪಾಟೀಲ್, ಆಡಳಿತ ನಿರ್ದೇಶಕ ನಿರಂಜನ್ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ ಸ್ವಾಗತಿಸಿ, ನಿರೂಪಿಸಿದರು.