ಉಡುಪಿ: ಅಂಬಲಪಾಡಿ ಜಂಕ್ಷನ್ ನಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಅಫಘಾತ ಒಂದರಲ್ಲಿ ಸೈಂಟ್ ಸಿಸಿಲಿಯ ಹೈಸ್ಕೂಲ್ ವಿದ್ಯಾರ್ಥಿ ಆದಿತ್ಯ ಪಿ. ಶೆಟ್ಟಿಗಾರ್ ತೀವ್ರವಾಗಿ ಗಾಯಗೊಂಡಿದ್ದಾನೆ. ಮಾಹಿತಿ ತಿಳಿದು ತಕ್ಷಣವೇ ಸ್ಥಳಕ್ಕೆ ಧಾವಿಸಿದ ಆಪತ್ಭಾಂಧವ ವಿಶು ಶೆಟ್ಟಿ ಅಂಬಲಪಾಡಿ, ಸಾರ್ವಜನಿಕರ ನೆರವಿನಿಂದ ಬಾಲಕನನ್ನು ಚಿಕಿತ್ಸೆಗಾಗಿ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಿರುವ ಬಗ್ಗೆ ಮಾಹಿತಿ ಇಲ್ಲದ ಕಾರಣ ಆದಿತ್ಯ ತನ್ನ ಸೈಕಲ್ ಮೂಲಕ ಶಾಲೆಗೆ ತೆರಳಿದ್ದು, ಅಂಬಲಪಾಡಿ ಜಂಕ್ಷನ್ ನಲ್ಲಿ ಅತಿ ವೇಗದಿಂದ ಬಂದ ಬೊಲೆರೋ ಟೆಂಪೋ ಬಾಲಕನಿಗೆ ಢಿಕ್ಕಿ ಹೊಡೆದ ಪರಿಣಾಮ ಬಾಲಕನಿಗೆ ತೀವ್ರವಾದ ಹೊಡೆತ ಬಿದ್ದಿದೆ. ತಕ್ಷಣವೇ ಹತ್ತಿರದ ಹೈಟೆಕ್ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆಗಾಗಿ ಕೊಂಡೊಯ್ಯಲಾಯಿತಾದರೂ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ಕೊಂಡೊಯ್ಯಲು ಶಿಫಾರಸು ಮಾಡಿದ್ದರಿಂದ ಬಾಲಕನನ್ನು ಮಣಿಪಾಲಕ್ಕೆ ಕೊಂಡು ಹೋಗಲಾಗಿದೆ.
ಟೆಂಪೋ ಚಾಲಕನ ಮೇಲೆ ಅತಿ ವೇಗದ ಚಾಲನೆಗಾಗಿ ನಗರ ಸಂಚರಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.