ಬೆಂಗಳೂರು: ಜಾರಿ ನಿರ್ದೇಶನಾಲಯದ ವರದಿಯ ಮೇರೆಗೆ ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಮಂಗಳವಾರ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ನಿವಾಸ ಸೇರಿದಂತೆ ಐದು ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಿದೆ.
ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿಯ ಅವರ ನಿವಾಸ, ಸಿಲ್ವರ್ ಓಕ್ ಅಪಾರ್ಟ್ಮೆಂಟ್ನ ಫ್ಲಾಟ್, ಸದಾಶಿವನಗರದ ಅತಿಥಿ ಗೃಹ, ಬನಶಂಕರಿಯಲ್ಲಿರುವ ಜಿಕೆ ಅಸೋಸಿಯೇಟ್ಸ್ ಕಚೇರಿ ಮತ್ತು ನಗರದ ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ತಂಡಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ಮುಂದುವರಿದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಆಗಸ್ಟ್ನಲ್ಲಿ, ಜಾರಿ ನಿರ್ದೇಶನಾಲಯವು ಖಾನ್ ಮತ್ತು ಇನ್ನೊಬ್ಬ ಮಾಜಿ ಸಚಿವ ಆರ್ ರೋಷನ್ ಬೇಗ್ ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು, 4,000 ಕೋಟಿ ರೂಪಾಯಿ ಮೌಲ್ಯದ ಐಎಂಎ ಪೊಂಜಿ ಯೋಜನೆಗೆ ಸಂಬಂಧಿಸಿದಂತೆ ಮುಸ್ಲಿಮರು ಕಷ್ಟಪಟ್ಟು ಸಂಪಾದಿಸಿ ಇಟ್ಟಿದ್ದ ಹಣವನ್ನು ವಂಚಿಸಿದ್ದಾರೆ ಎಂದು ಖಾನ್ ಮತ್ತು ಬೇಗ್ ಮೇಲೆ ದೂರು ದಾಖಲಾಗಿತ್ತು. ಖಾನ್ ಹಲವು ಬಾರಿ ಇಡಿ ಮುಂದೆ ಹಾಜರಾಗಿದ್ದರು. ಇಡಿ ತನಿಖೆಯ ಆಧಾರದ ಮೇಲೆ ಎಸಿಬಿ ದಾಳಿ ನಡೆದಿದೆ.
ಕಾಂಗ್ರೆಸ್ ಶಾಸಕ ಬಿಝಡ್ ಜಮೀರ್ ಅಹ್ಮದ್ ಖಾನ್ ಅವರ ನಿವಾಸ ಸೇರಿದಂತೆ ಐದು ವಿವಿಧ ಸ್ಥಳಗಳಲ್ಲಿ ಎಸಿಬಿ ನಡೆಸಿದ ದಾಳಿ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
 
								 
															





 
															 
															 
															











