ತಂಪು ತಂಪು ಕೂಲ್ ಕೂಲ್ “ಕೂಡ್ಲು”: ಬೇಸಿಗೆಗೂ ಕರಗದ ಈ ಜಲಪಾತದ ಚಂದ ನೋಡಿ ಬನ್ನಿ

ಬೇಸಿಗೆಯಲ್ಲೂ  ಇಲ್ಲಿ ತಂಪು ತಂಪು ಕೂಲ್ ಕೂಲ್ ಎನ್ನುವ ಹಿತವಿರುತ್ತದೆ. ಬಿಸಿಲಿನ ಬೇಗೆಗೆ ಬಳಲಿ ಬೆಂಡಾಗಿ ಇಲ್ಲಿಗೆ ಬಂದರೆ ಆಹಾ ಜಲಪಾತದ ತಂಪಿಗೆ ಮೈ ಮನವೆಲ್ಲಾ ಬೆರಗಾಗುತ್ತದೆ.  ಬೇಸಿಗೆಯಲ್ಲೂ ಕಾಡುವ ಈ ಜಲಪಾತವೇ ಉಡುಪಿ ಜಿಲ್ಲೆಯ ಕೂಡ್ಲು ಎನ್ನುವ ಸುರಸುಂದರಿ.

ಆಗುಂಬೆ- ಹೆಬ್ರಿ ಮಾರ್ಗದಲ್ಲಿ ಸಿಗುವ ಈ ಕೂಡ್ಲು ತೀರ್ಥ ಜಲಪಾತಕ್ಕೆ  ದಾರಿ ಹಿಡಿದರೆ, ದೂರದಲ್ಲೆಲ್ಲೋ ಜಲಪಾತದ ಸಂಗೀತ ಕೇಳಿಸುತ್ತದೆ. ಸುತ್ತಲೂ ಮುಗಿಲ ನೆತ್ತಿಗೆ ತಾಗಿದಂತೆ ನಿಂತಿರುವ ಹಸಿರ ಬೆಟ್ಟದ ತುದಿಯನ್ನು ನೋಡುತ್ತ ಈ ಕಾಡಿನಲ್ಲಿ ಚಾರಣ ಮಾಡುತ್ತ. ಕೊನೆಗೆ ಕೂಡ್ಲು ಜಲಪಾತದ ದರುಶನ ಭಾಗ್ಯವಾದರೆ  ಏನೋ ಸಿಕ್ಕಿದಂತಹ ಖುಷಿ.

 

ಬಿಸಿಲಿಗೂ ಅರಳುವ ಕೂಡ್ಲು:

 ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿರುವ ಸೀತಾ ನದಿ ಹರಿದು, ಎತ್ತರದಿಂದ ಧುಮ್ಮಿಕ್ಕಿ ಕೂಡ್ಲು ಜಲಪಾತವಾಗಿದ್ದಾಳೆ. ಈ ಜಲಪಾತ  ಧುಮ್ಮಿಕ್ಕೋದು ನೋಡಲು ಬಲು ಅಂದ. ಸುಮಾರು ೧೮೦ ಅಡಿ ಎತ್ತರದಿಂದ ಹಾಲಿನಂತೆ ಧುಮ್ಮಿಕ್ಕವ ಜಲಪಾತದ ನೋಟ, ಹಬ್ಬದೂಟ. ಮಳೆಗಾಲದಲ್ಲಂತೂ ರುದ್ರ ರಮಣೀಯ.

ಎಲ್ಲಿದೆ?

ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿದೆ. ಬೆಂಗಳೂರಿನಿಂದ ಸುಮಾರು ೩೭೩ ಕಿ.ಮೀ ದೂರ. ಉಡುಪಿ ಪೇಟೆಯಿಂದ ೬೪ ಕಿ.ಮೀ, ಆಗುಂಬೆಯಿಂದ ೨೬ ಕಿ.ಮೀ ದೂರವಿದೆ. ಹೆಬ್ರಿ- ಸೋಮೇಶ್ವರ ದಾರಿಯಲ್ಲಿ ಸುಮಾರು ೨೦ ಕಿ.ಮೀ ಸಾಗಿದಾಗ ರಸ್ತೆಯ ಬಲ ಬದಿಯಲ್ಲಿ ಕೂಡ್ಲು ತೀರ್ಥಕ್ಕೆ ಹೋಗುವ ದಾರಿ ಎನ್ನುವ ಬೋರ್ಡ್ ಕಾಣಿಸುತ್ತದೆ. ಅಲ್ಲಿಂದ ಸುಮಾರು ೭ ಕಿ.ಮೀ ಸಾಗಿದರೆ ಕೂಡ್ಲು ತೀರ್ಥ ಸ್ವಾಗತ ದ್ವಾರ ಸಿಗುತ್ತದೆ. ಅಲ್ಲಿ ಟಿಕೇಟ್ ಮಾಡಿಸಿ ಕಾಡ ದಾರಿಯಲ್ಲಿ ಸುಮಾರು ೧.೨ ಕಿ.ಮೀ ನಡೆದರೆ ಜಲಪಾತ ಸಿಗುತ್ತದೆ.ವಯಸ್ಕರಿಗೆ ರೂ.೫೦ ಮಕ್ಕಳಿಗೆ ರೂ. ೨೫ ಟಿಕೇಟು ದರ. ಮಳೆಗಾಲದಲ್ಲಿ ಈ ತಾಣಕ್ಕೆ ಪ್ರವೇಶವಿಲ್ಲ. ಅಕ್ಟೋಬರ್ -ಮೇ ವರೆಗೂ ಪ್ರವಾಸಿಗರಿಗೆ ಮುಕ್ತ ಅವಕಾಶವಿದೆ. ಬೆಳಗ್ಗೆ ೯ ರಿಂದ ಸಂಜೆ ೫ ರ ಒಳಗೆ ಪ್ರವೇಶ.

 ಉಡುಪಿ Xpress  ಪರಿಸರ ಕಾಳಜಿ :

ಈ ಚಂದದ ತಾಣ ಪಶ್ಚಿಮಘಟ್ಟದ ಅತ್ಯಂತ ಸುಂದರ ಪ್ರದೇಶ. ದಯವಿಟ್ಟೂ ಇಲ್ಲಿಗೆ ಹೋಗಲು ಬಯಸುವವರು, ಪಾರ್ಟಿ, ಮಸ್ತಿ ಮಾಡೋದಕ್ಕೆ ಈ ಕಾಡನ್ನು ಬಳಸಿಕೊಳ್ಳಬೇಡಿ. ಅಲ್ಲಲ್ಲಿ  ಪ್ಲಾಸ್ಟಿಕ್ ಎಸೆಯೋದು, ಬಾಟಲಿ ಬಿಸಾಕಿ ಕಾಡಿನ ಏಕಾಂತವನ್ನು ಹಾಳುಮಾಡಬೇಡಿ. ಮೌನದಲ್ಲಿ, ಕಾಡಲ್ಲಿ ಬೊಬ್ಬೆ ಹೊಡೆಯದೆ ಪ್ರವಾಸದ ಸುಖ ಅನುಭವಿಸಿ. ನಿಮ್ಮ ಬೊಬ್ಬೆ ಕಾಡುಪ್ರಾಣಿಗಳಿಗೆ, ಹಕ್ಕಿಗಳ  ಬದುಕಿಗೆ ಮಾರಕವಾಗದಿರಲಿ.

ಉಳಿಯಲು ವ್ಯವಸ್ಥೆ ಇದೆ:

ರಾತ್ರಿ ಉಳಿದುಕೊಳ್ಳಲು ಆಗುಂಬೆ-ಸೋಮೇಶ್ವರ ರಸ್ತೆಯಲ್ಲಿ ಕಾಡು ಮನೆ ಹೋಮ್ ಸ್ಟೇ(ಸಂಪರ್ಕ: 7892539602, 9880130826)) ಲಭ್ಯವಿದೆ. ಹೆಬ್ರಿಯಲ್ಲಿ ಅರಣ್ಯ ಇಲಾಖೆಯ ಸೀತಾನದಿ ರೆಸಾರ್ಟ್( ಸಂಪರ್ಕ  9449599758)  ಲಭ್ಯವಿದೆ.

 ಕೂಡ್ಲು ತೀರ್ಥದ ವಿಡಿಯೋ ಚಿತ್ರಿಕೆ ಇಲ್ಲಿದೆ ನೋಡಿ: