ನವದೆಹಲಿ: “ಕಾರುಗಳನ್ನು ಮಾರಾಟ ಮಾಡಲು ಮತ್ತು ಸೇವೆ ನೀಡಲು ಮೊದಲು ನಮಗೆ ಅನುಮತಿ ನೀಡದ ಹೊರತು ಭಾರತದ ಯಾವುದೇ ಸ್ಥಳದಲ್ಲಿ ಟೆಸ್ಲಾ ಉತ್ಪಾದನಾ ಘಟಕವನ್ನು ಹಾಕುವುದಿಲ್ಲ” ಎಂದು ಎಲೆಕ್ಟ್ರಿಕ್ ಕಾರು ಟೆಸ್ಲಾದ ನಿರ್ಮಾತ ಏಲನ್ ಮಸ್ಕ್ ಹೇಳಿದ್ದಾರೆ.
ಟೆಸ್ಲಾ ಸಂಸ್ಥಾಪಕರು ಭಾರತದಲ್ಲಿ ಇವಿ ಕಾರುಗಳನ್ನು ತಯಾರಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ, ಮಾರಾಟ ಮತ್ತು ಸೇವೆಯನ್ನು ಅನುಮತಿಸುವವರೆಗೆ, ಭಾರತದಲ್ಲಿ ಯಾವುದೇ ಸ್ಥಾವರವನ್ನು ಸ್ಥಾಪಿಸುವುದಿಲ್ಲ ಎಂದು ಟ್ವಿಟರ್ ಬಳಕೆದಾರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
2016 ರಿಂದಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿರುವ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಕೆಲವು ಬುಕಿಂಗ್‌ಗಳನ್ನು ಕೂಡಾ ತೆಗೆದುಕೊಂಡಿರುವ ಎಲೋನ್ ಮಸ್ಕ್, ಮೊದಲು ಕಂಪನಿಯು ಆಮದು ಮಾಡಿಕೊಂಡ ವಾಹನಗಳೊಂದಿಗೆ ಭಾರತವನ್ನು ಪ್ರವೇಶಿಸಲು ಬಯಸುತ್ತದೆ. ಭಾರತದಲ್ಲಿ ಬುನಾದಿಯನ್ನು ಸ್ಥಾಪಿಸಿ ನಂತರ ಭಾರತದಲ್ಲಿ ಕಾರುಗಳನ್ನು ತಯಾರಿಸುವ ಸಾಧ್ಯತೆಗಳನ್ನು ಅವಲೋಕಿಸಲಿದೆ ಎಂದು ಹೇಳುತ್ತಲೇ ಬಂದಿದ್ದಾರೆ. ಭಾರತದಲ್ಲಿ ಕಾರುಗಳ ಮೇಲಿನ ಹೆಚ್ಚಿನ ಆಮದು ಸುಂಕಗಳು ವಿಶ್ವದ ಅತ್ಯಂತ ಮೌಲ್ಯಯುತವಾದ ಆಟೋ ಬ್ರಾಂಡ್ ಭಾರತದ ರಸ್ತೆಗಳಲ್ಲಿ ಓಡಾಡುವ ಕನಸನ್ನು ವಿಳಂಬಗೊಳಿಸುತ್ತಿದೆ.
ಆಮದು ಸುಂಕ ಹೊರೆಯನ್ನು ತಪ್ಪಿಸಿಕೊಳ್ಳಲು ಭಾರತದಲ್ಲೇ ಕಾರುಗಳನ್ನು ತಯಾರಿಸುವಂತೆ ಭಾರತ ಸರಕಾರವು ಟೆಸ್ಲಾ ಕಂಪನಿಗೆ ಮನವಿ ಮಾಡುತ್ತಲೇ ಬಂದಿದೆ. ಆದರೆ ತಾವು ಭಾರತದಲ್ಲಿ ಕಾರು ತಯಾರಿಸಬೇಕಾದರೆ ಮೊದಲು ಕಾರುಗಳನ್ನು ಮಾರಾಟಮಾಡಲು ಮತ್ತು ಸೇವೆ ನೀಡಲು ಅನುಮತಿಸಬೇಕು ಎಂದು ಮಸ್ಕ್ ಹಠ ಹಿಡಿದು ಕೂತುಬಿಟ್ಟಿದ್ದಾರೆ.