ಉಡುಪಿ: ಈಗಾಗಲೇ ಕೌಶಲ್ಯಾಭಿವೃದ್ಧಿ ತರಬೇತಿಗಳಿಗೆ ಪ್ರಸಿದ್ಧಿ ಪಡೆದಿರುವ ಹಾಗೂ ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮ (ಕೆ ಎಸ್ ಡಿ ಸಿ) ದ ತರಬೇತಿ ಪಾಲುದಾರ ಸಂಸ್ಥೆಯಾದ ಉನ್ನತಿ ಕೆರಿಯರ್ ಅಕಾಡೆಮಿ ಕಳೆದ ಮೂರು ವರ್ಷಗಳಿಂದ 3000ಕ್ಕೂ ಅಧಿಕ ಯುವಕ-ಯುವತಿಯರಿಗೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಸೃಷ್ಟಿಸಿದೆ. ಈ ಕಾರ್ಯದ ಹಿಂದೆ ಸಂಚಲನ ಸ್ವಯಂ ಸೇವಾ ಸಂಘಟನೆ ಸಂಪೂರ್ಣ ಸಹಕಾರ ನೀಡುತ್ತಾ ಬರುತ್ತಿದೆ.
ಇದೀಗ ಈ ಎರಡು ಸಂಸ್ಥೆಗಳ ಸಹಕಾರದೊಂದಿಗೆ ಉಡುಪಿ ಜಿಲ್ಲೆಯ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಪದವಿ ವಿದ್ಯಾರ್ಥಿಗಳಿಗೆ ಹಾಗೂ 25 ವರ್ಷದೊಳಗಿನ 3000ಕ್ಕೂ ಹೆಚ್ಚಿನ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ನೀಡುವ ಉದ್ದೇಶದಿಂದ ಉಡುಪಿ ಜಿಲ್ಲಾ ಮಟ್ಟದ ಉನ್ನತಿ-ಸಂಚಲನ ಮೆಗಾ ಸ್ಕಾಲರ್ ಶಿಪ್’ ಸ್ಪರ್ಧೆ ಯನ್ನು ಆಯೋಜಿಸುತ್ತಿದೆ.
ಉನ್ನತಿ ಸಂಸ್ಥೆಯು ಈಗಾಗಲೇ ಬಿ ಎಫ್ ಎಸ್ ಐ (ಬ್ಯಾಂಕಿಂಗ್, ಫೈನಾನ್ಶಿಯಲ್ ಸರ್ವೀಸಸ್, ಇನ್ಸುರೆನ್ಸ್) ಕ್ಷೇತ್ರ ದಲ್ಲಿ ಬಹುಬೇಡಿಕೆಯ ಕೆವೈಸಿ- ಎಎಂಎಲ್, ಕಸ್ಟಮರ್ ಸರ್ವೀಸ್-ಬ್ಯಾಂಕಿಂಗ್ ಸ್ಟ್ಯಾಂಡರ್ಡ್ಸ್ ಕೋಡ್, ಡಿಜಿಟಲ್ ಬ್ಯಾಂಕಿಂಗ್ ಎಂಬ ಮೂರು ಕೋರ್ಸ್ ಗಳನ್ನು ಪ್ರಾರಂಭಿಸಿದೆ.
ಹಾಗೆಯೇ ಐಟಿ-ಐಟಿಇಎಸ್ ಕ್ಷೇತ್ರ ದಲ್ಲಿ ಫ್ರಂಟ್ ಎಂಡ್ ಡೆವಲಪ್ಮೆಂಟ್, ಬ್ಯಾಕ್ ಎಂಡ್ ಡೆವಲಪ್ಮೆಂಟ್ ಮತ್ತು ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಈ ಮೂರೂ ಕೋರ್ಸ್ ಗಳನ್ನು ಒಳಗೊಂಡ ಫುಲ್ ಸ್ಟ್ಯಾಕ್ ಡೆವಲಪರ್ ಕೋರ್ಸ್ ನ್ನು ಇಂಟರ್ನ್ಷಿಪ್ ನೊಂದಿಗೆ ಪ್ರಾರಂಭಿಸಿದೆ.
ಇದರೊಂದಿಗೆ ಅಭ್ಯರ್ಥಿಗಳ ಇಂಗ್ಲೀಷ್ ಸಂವಹನ ಕಲೆ, ಆಪ್ಟಿಟ್ಯೂಡ್, ಲಾಜಿಕಲ್ ರೀಸನಿಂಗ್, ವ್ಯಕ್ತಿತ್ವ ವಿಕಸನದಂತಹ ಕಲೆಗಳನ್ನು ವೃದ್ಧಿಸುವ ಎಂಪ್ಲ್ಯಾಯೆಬಿಲಿಟಿ ಎನ್ ಹಾನ್ಸ್ ಸ್ಮೆಂಟ್ ಪ್ರೋಗ್ರಾಮ್ (ಇಇಪಿ) ಕೋರ್ಸ್ ಕೂಡಾ ಪ್ರಾರಂಭಿಸಿದೆ.
ಈ ಮೇಲಿನ ಎಲ್ಲಾ ಕೋರ್ಸ್ ಗಳಿಗೆ 1 ರಿಂದ 3 ತಿಂಗಳ ಅವಧಿಯ ತರಬೇತಿ ನೀಡಿ ಆ ನಂತರ ಉದ್ಯೋಗ ಮೇಳಗಳನ್ನು ಆಯೋಜಿಸಿ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವನ್ನು ಸಂಸ್ಥೆಯ ಮೂಲಕವೇ ಒದಗಿಸಲಾಗುವುದು.
ಸ್ಪರ್ಧಾ ಕಾರ್ಯಕ್ರಮದ ವಿವರ:
ಮಾರುಕಟ್ಟೆಯಲ್ಲಿ ಸಾವಿರಾರು ರೂಪಾಯಿಗಳನ್ನು ವ್ಯಯಿಸಬೇಕಾದ ಈ ಕೋರ್ಸ್ ಗಳನ್ನು ಇದೀಗ ಉನ್ನತಿ ಹಾಗೂ ಸಂಚಲನ ಸಂಸ್ಥೆಯು ಸ್ಕಾಲರ್ ಶಿಪ್ ಮೂಲಕ ಉಡುಪಿ ಜಿಲ್ಲೆಯ ಅಭ್ಯರ್ಥಿಗಳಿಗೆ ದತ್ತು ಸ್ವೀಕಾರ ಹಾಗೂ ಕನಿಷ್ಠ ಶುಲ್ಕದೊಂದಿಗೆ ನೀಡಲು ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಏರ್ಪಡಿಸಿದೆ. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.
ಈ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ಕಾಲೇಜಿನ ಕನಿಷ್ಠ 126 ವಿದ್ಯಾರ್ಥಿಗಳಿಗೆ ಹಾಗೂ ಒಟ್ಟಾರೆ ಉಡುಪಿ ಜಿಲ್ಲೆಯ 3150 ಅಭ್ಯರ್ಥಿಗಳಿಗೆ ವಿವಿಧ ರೀತಿಯ ಸ್ಕಾಲರ್ ಶಿಪ್ ಅವಕಾಶ ದೊರಕಲಿದ್ದು, ಇದರಲ್ಲಿ 150 ವಿದ್ಯಾರ್ಥಿಗಳಿಗೆ ಸಂಪೂರ್ಣ ದತ್ತು ಸ್ವೀಕಾರ, 750 ವಿದ್ಯಾರ್ಥಿಗಳಿಗೆ ಶೇ.75%, 750 ಅಭ್ಯರ್ಥಿಗಳಿಗೆ ಶೇ.50%, 1500 ಅಭ್ಯರ್ಥಿಗಳಿಗೆ ಶೇ.25%ರಷ್ಟು ಸ್ಕಾಲರ್ ಶಿಪ್ ಒದಗಲಿದೆ.
ಸ್ಪರ್ಧೆಯಲ್ಲಿ ಭಾಗವಹಿಸಿರುವ ಅಭ್ಯರ್ಥಿಗಳು ತರಬೇತಿಗೆ ದಾಖಲಾತಿ ಪಡೆದರೆ ಈ ಎಲ್ಲಾ ಅಭ್ಯರ್ಥಿಗಳಿಗೂ ರೂ.2000ದ ಸ್ಕಾಲರ್ ಶಿಪ್ ದೊರಕಲಿದೆ. ಒಟ್ಟಾರೆ ಈ ಕಾರ್ಯಕ್ರಮದ ಮೂಲಕ ಅಂದಾಜು 4.50 ಕೋಟಿಗೂ ಅಧಿಕ ಸ್ಕಾಲರ್ ಶಿಪ್ ಲಭ್ಯವಾಗಲಿದ್ದು ಇದನ್ನು ಉನ್ನತಿ ಹಾಗೂ ಸಂಚಲನ ಸಂಸ್ಥೆಯು ತನ್ನ ಸಾಮಾಜಿಕ ಬದ್ಧತೆಯೊಂದಿಗೆ ಜಿಲ್ಲೆಯ ಸಾವಿರಾರು ಯುವಕ-ಯುವತಿಯರ ಭವಿಷ್ಯ ನಿರ್ಮಾಣದ ದೃಷ್ಟಿಯಿಂದ ವ್ಯಯಿಸಲಿದೆ.
ಈ ಸ್ಪರ್ಧಾ ಕಾರ್ಯಕ್ರಮದಿಂದ ಜಿಲ್ಲೆಯ ಸುಮಾರು 3000ಕ್ಕೂ ಹೆಚ್ಚಿನ ಯುವಕ-ಯುವತಿಯರಿಗೆ ಬಿಎಫ್ ಎಸ್ ಐ ಹಾಗೂ ಐಟಿ ಕ್ಷೇತ್ರಗಳಲ್ಲಿ ಉತ್ತಮ ಉದ್ಯೋಗವಕಾಶಗಳನ್ನು ಒದಗಿಸುವ ಗುರಿಯನ್ನು ಸಂಸ್ಥೆ ಹಾಕಿಕೊಂಡಿದೆ.
ಈ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಆಯ್ದ ಕಾಲೇಜುಗಳ ಅಂತಿಮ ಪದವಿ ಓದುತ್ತಿರುವ ವಿದ್ಯಾರ್ಥಿಗಳು, 2021 ಮತ್ತು 2020ರಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಅಥವಾ 25 ವರ್ಷಕ್ಕಿಂತ ಕೆಳಗಿನ ಎಲ್ಲ ಯುವಕ-ಯುವತಿಯರು ಭಾಗವಹಿಸಲು ಅವಕಾಶವಿದೆ. ಜಿಲ್ಲೆಯಿಂದ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಳ್ಳುವ ಮೊದಲ 25 ಕಾಲೇಜುಗಳಿಗೆ ಆದ್ಯತೆ ನೀಡಲಾಗುವುದು. ಈ ಸ್ಕಾಲರ್ ಶಿಪ್ ಟೆಸ್ಟ್ ನ ಹೆಚ್ಚಿನ ಮಾಹಿತಿಗಾಗಿ https://unnathi.careers/scholarship-program/ ಗೆ ಭೇಟಿ ನೀಡಬಹುದು ಎಂದು ಸಂಸ್ಥೆಯ ಸ್ಥಾಪಕ ಪ್ರೇಮ್ ಪ್ರಸಾದ್ ಶೆಟ್ಟಿ, ನಿರ್ದೇಶಕಿ ಶ್ರೀಮತಿ ಪೌರ್ಣಮಿ ಪ್ರೇಮ್ ಶೆಟ್ಟಿ, ತರಬೇತುದಾರ ನವೀನ್ ನಾಯಕ್, ರಾಜೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.