ಬ್ರಹ್ಮಾವರ: ಬ್ರಹ್ಮಾವರ ಹೆರಂಜೆ ಕ್ಲಬ್ ನಿವೇಶನದಲ್ಲಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ನ ಕ್ರೀಡಾ ಸಂಕಿರಣ ಕಟ್ಟಡವು ಮೇ 23ರಂದು ಬೆಳಿಗ್ಗೆ 10 ಗಂಟೆಗೆ ಶಿಲಾನ್ಯಾಸ ನೆರವೇರಲಿದೆ.
ಉಡುಪಿ ಶಾಸಕರಾದ ಕೆ. ರಘುಪತಿ ಭಟ್ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಅತಿಥಿಗಳಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಗುರ್ಮೆ ಫೌಂಡೇಶನ್ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಹುಬ್ಬಳ್ಳಿ ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, ಚಾಂತಾರು ಗ್ರಾ.ಪಂ. ಅಧ್ಯಕ್ಷೆ ಮೀರಾ ಸದಾನಂದ ಪೂಜಾರಿ, ಹೋಟೆಲ್ ಮಣಿಪಾಲ್ ಇನ್ ಮುಖ್ಯ ನಿರ್ದೇಶಕ ಮೌಲಾನಾ ಇಬ್ರಾಹಿಂ ಉಪಸ್ಥಿತರಿರುವರು.
ಜಿಲ್ಲೆಯಲ್ಲಿ ವಿಶೇಷ ಸೌಲಭ್ಯವಾಗಿ ಕ್ರೀಡಾ ಸಂಕೀರ್ಣ ಸೇರ್ಪಡೆ:
ಕ್ರೀಡಾ ಸಂಕೀರ್ಣದಲ್ಲಿ ಸುಸಜ್ಜಿತ ಕ್ಲಬ್ ಕಚೇರಿ, ರಿಕ್ರಿಯೇಷನ್ ಕ್ಲಬ್, ಜಿಮ್ನಾಶಿಯಂ, ಕ್ಯಾಂಟೀನ್, ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ 8 ರೂಂ ಗಳು ಇರಲಿದೆ.
ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಈಗಾಗಲೇ 2.5 ಎಕ್ರೆ ಸ್ವಂತ ನಿವೇಶನ ಹೊಂದಿದ್ದು, 2 ಟೆನಿಸ್ ಕೋರ್ಟ್, ಒಳಾಂಗಣ ಕ್ರೀಡಾಂಗಣ, ಸುಸಜ್ಜಿತ ಈಜುಕೊಳ, ಬಯಲು ರಂಗ ಮಂಟಪ, ಚಿಲ್ಡ್ರನ್ಸ್ ಪಾರ್ಕ್ ಹೊಂದಿವೆ.
ಇದೀಗ ಜಿಲ್ಲೆಯಲ್ಲಿ ವಿಶೇಷ ಸೌಲಭ್ಯ ವಾಗಿ ಕ್ರೀಡಾ ಸಂಕೀರ್ಣ ಸೇರ್ಪಡೆಯಾಗುತ್ತಿದೆ. ಈ ಕ್ಲಬ್ 300ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಸಾರ್ವಜನಿಕರೂ ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ನಿರಂತರ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವ ಕ್ಲಬ್ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ರಾಜ್ಯೋತ್ಸವ, ಏಕಲವ್ಯ ಸೇರಿದಂತೆ ಹಲವು ಪ್ರಶಸ್ತಿಗಳಿಂದ ಪುರಸ್ಕೃತವಾಗಿದೆ.
ಸತತ 7 ವರ್ಷಗಳಿಂದ ಅಧ್ಯಕ್ಷರಾಗಿರುವ ಎಂ. ಚಂದ್ರಶೇಖರ ಹೆಗ್ಡೆಯವರು ಸದಸ್ಯರ ಸಹಕಾರದೊಂದಿಗೆ ಕ್ಲಬ್ ಮುನ್ನಡೆಸುತ್ತಿದ್ದಾರೆ.