ದೆಹಲಿ: ಭಾರತದ ರಾಜಧಾನಿಯಲ್ಲಿ ಆಟೋರಿಕ್ಷಾ ಚಾಲಕರಾಗಿರುವ ಮಹೇಂದ್ರ ಕುಮಾರ್ ಎಂಬುವರು ತಮ್ಮ ಪ್ರಯಾಣಿಕರನ್ನು ತಂಪಾಗಿರಿಸಲು ವಿಶಿಷ್ಟ ವಿಧಾನ ಒಂದನ್ನು ಅಳವಡಿಸಿಕೊಂಡಿದ್ದಾರೆ. ದೆಹಲಿಯ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ತಲುಪಿದರೂ ಇವರ ಆಟೋದೊಳಗಡೆ ಕುಳಿತು ಪ್ರಯಾಣ ಮಾಡುವ ಪ್ರಯಾಣಿಕರ ತಲೆ ತಂಪಾಗಿರುತ್ತದೆ.
ತಮ್ಮ ಆಟೋದ ಛಾವಣಿಯ ಮೇಲೆ ಹಚ್ಚ ಹಸಿರಿನ ಉದ್ಯಾನವೊಂದನ್ನು ಬೆಳೆಸಿರುವ ಕುಮಾರ್, ಬೇಸಿಗೆಯ ಬಿರು ಬಿಸಿಲಿನಲ್ಲೂ ಪ್ರಯಾಣಿಕರಿಗೆ ತಂಪನ್ನುಣಿಸುತ್ತಿದ್ದಾರೆ. 48 ವರ್ಷ ವಯಸ್ಸಿನ ಕುಮಾರ್ ಅವರ ಈ ‘ಚಲಿಸುವ ಉದ್ಯಾನ’ವು ಗ್ರಾಹಕರ ಮನಸೂರೆಗೊಳ್ಳುತ್ತಿದೆ. ಇವರ ರಿಕ್ಷಾದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಫೋಟೋ ಕ್ಲಿಕ್ಕಿಸಿ, ವಿಡಿಯೋ ಮಾಡಿ ಸಂತೋಷ ಪಡುತ್ತಿದ್ದಾರೆ.
ಎರಡು ವರ್ಷಗಳ ಹಿಂದೆ ಸುಡು ಬೇಸಿಗೆಯಿಂದ ಪಾರಾಗಲು ಈ ಉಪಾಯ ಹೊಳೆದಿದ್ದು, ಪೊದೆಗಳಿಂದ ಹಿಡಿದು ಹೂವುಗಳವರೆಗೆ, ಕುಮಾರ್ ಅವರು ವಿವಿಧ ರೀತಿಯ 20 ಗಿಡಗಳನ್ನು ಬೆಳೆದಿದ್ದಾರೆ. ದೆಹಲಿಯಲ್ಲಿ ಸಾವಿರಾರು ರಿಕ್ಷಾಗಳಿದ್ದರೂ ಗ್ರಾಹಕರು ಕುಮಾರ್ ರಿಕ್ಷಾದಲ್ಲಿ ಪ್ರಯಾಣಿಸಲು ಬಯಸುತ್ತಾರೆ ಮಾತ್ರವಲ್ಲ 10-20ರೂ. ಗಳ ಟಿಪ್ ಅನ್ನು ಕೂಡಾ ನೀಡುತ್ತಾರೆ ಎನ್ನುತ್ತಾರೆ ಕುಮಾರ್.












