ಮಣಿಪಾಲದಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ 111ನೇ ಶಾಖೆ, ಮೊಬೈಲ್ ಬ್ಯಾಂಕ್ ಉದ್ಘಾಟನೆ
ಮಣಿಪಾಲ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ( ಎಸ್ ಸಿಡಿಸಿಸಿ ಬ್ಯಾಂಕ್) ಇದರ 111ನೇ ಶಾಖೆ ಮತ್ತು ಉಡುಪಿ ಮೊಬೈಲ್ ಬ್ಯಾಂಕ್ ಮಣಿಪಾಲದಲ್ಲಿ ಸೋಮವಾರ ಉದ್ಘಾಟನೆಗೊಂಡಿತು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ದೀಪ ಪ್ರಜ್ವಲನೆಯ ಮಾಡುವ ಮೂಲಕ ನೂತನ ಶಾಖೆಯನ್ನು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಎಂ. ಐ. ಟಿ. ಕಾಲೇಜ್ ಬಳಿಯ ಮೈದಾನದಲ್ಲಿ ನಡೆದ ನವೋದಯ ಸ್ವಸಹಾಯ ಸಂಘಗಳ ಸಾಧನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸಚಿವ, “ಹಿಂದೆ ಹೆಣ್ಣುಮಕ್ಕಳು ಮನೆಗೆ ಮಾತ್ರ ಸೀಮಿತ ಎಂಬ ಮಾತಿತ್ತು. ಆದರೆ , ಈಗ ಹೆಣ್ಣುಮಕ್ಕಳು ಮನೆಯಿಂದ ಹೊರಬಂದು ಎಲ್ಲ ಕ್ಷೇತ್ರಗಳಲ್ಲಿ ತೊಡಗಿಕೊಂಡು ಸಶಕ್ತರಾಗಿದ್ದಾರೆ. ಇದಕ್ಕೆ ಡಾ.ಎಂ.ಎನ್.ರಾಜೇಂದ್ರ ಕುಮಾರ್ ನೇತೃತ್ವದ ಎಸ್ ಸಿಡಿಸಿಸಿ ಬ್ಯಾಂಕ್ ನೀಡುತ್ತಿರುವ ಅವಿರತ ಪ್ರೋತ್ಸಾಹ ಕಾರಣವಾಗಿದೆ. ಇದು ನಿಜಕ್ಕೂ ಶ್ಲಾಘನೀಯವಾದುದು. ಮಹಿಳೆಯರು ಆರ್ಥಿಕವಾಗಿ ಬಲಿಷ್ಠರಾದರೆ ಇಡೀ ಕುಟುಂಬ ಬಲಿಷ್ಠಗೊಳ್ಳುತ್ತದೆ. ನವೋದಯ ಸ್ವಸಹಾಯ ಸಂಘಗಳ ಮೂಲಕ ಇಂದು ಇಡೀ ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯುವ ಕೆಲಸವನ್ನು ರಾಜೇಂದ್ರ ಕುಮಾರ್ ಅವರು ಮಾಡುತ್ತಿದ್ದಾರೆ” ಎಂದರು.
ಉಡುಪಿ ಮೊಬೈಲ್ ಬ್ಯಾಂಕ್ ಉದ್ಘಾಟಿಸಿದ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕರಾದ ಬೆಳ್ಳಿ ಪ್ರಕಾಶ್ ಮಾತಾನಾಡಿ, “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದಲ್ಲಿ ಆರ್ಥಿಕ ಸಾಧನೆ, ಆರ್ಥಿಕ ಶಿಸ್ತು ಮೂಡಿಸಿರುವ ರಾಜೇಂದ್ರ ಕುಮಾರ್ ಅವರ ಸಾಧನೆ ಅಭಿನಂದನೀಯ. ಹೆಣ್ಣುಮಕ್ಕಳು ಆರ್ಥಿಕವಾಗಿ ಸ್ವಾವಲಂಬಿಗಳಾದರೆ ಇಡೀ ಕುಟುಂಬ ಬಲಿಷ್ಠವಾಗುತ್ತದೆ. ಇದಕ್ಕೆ ನವೋದಯ ಸ್ವಸಹಾಯ ಗುಂಪುಗಳು ಉತ್ತಮ ಉದಾಹರಣೆಯಾಗಿದೆ.” ಎಂದರು.
ಶಾಖೆಯ ಭದ್ರತಾಕೋಶದ ಉದ್ಘಾಟನೆ ಹಾಗೂ ಸಮಾರಂಭದಲ್ಲಿ ಪ್ರಥಮ ಠೇವಣಿ ಪತ್ರ ವಿತರಣೆ ಮಾಡಿ ಮಾತಾಡಿದ ಉಡುಪಿ ಶಾಸಕ ರಘುಪತಿ ಭಟ್, “ಸಹಕಾರಿ ಕ್ಷೇತ್ರದ ಪ್ರಾಮಾಣಿಕತೆ ಮತ್ತು ನಿಷ್ಠೆಯನ್ನು ನಾವು ಉಳಿಸಿಕೊಂಡಲ್ಲಿ ಇನ್ನಷ್ಟು ಅಭಿವೃದ್ಧಿ ಕಾಣಲು ಸಾಧ್ಯವಿದೆ. ನವೋದಯ ಸ್ವಸಹಾಯ ಸಂಘಗಳಿಂದ ಮಹಿಳೆಯರಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಸಾಮಾಜಿಕ, ಆರ್ಥಿಕ ಬದಲಾವಣೆಗೆ ಸ್ವಸಹಾಯ ಸಂಘಗಳು ಕಾರಣವಾಗಿವೆ. ಇಂದು ಸಾಮಾಜಿಕ ಪರಿವರ್ತನೆಯಲ್ಲಿ ಮಹಿಳೆಯರ ಪಾತ್ರ ಬಹಳಷ್ಟಿದೆ” ಎಂದರು.
ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕೊರೋನಾದಲ್ಲಿ ಮೃತಪಟ್ಟಿರುವ 59 ರೈತರಿಗೆ ತಲಾ 1 ಲಕ್ಷ ರೂಪಾಯಿ ಧನಸಹಾಯ ಹಸ್ತಾಂತರಿಸಲಾಯಿತು. ನವೋದಯ ಗುಂಪುಗಳಿಗೆ ಸಾಲ ವಿತರಣೆ, ಚೈತನ್ಯ ವಿಮಾ ಚೆಕ್ ವಿತರಣೆ ಮಾಡಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್, “ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ 1999ರಲ್ಲಿ ನವೋದಯ ಸ್ವಸಹಾಯ ಗುಂಪುಗಳನ್ನು ಪ್ರಾರಂಭ ಮಾಡಲಾಯಿತು. ಅಂದಿನಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಗುಂಪುಗಳ ಸಾಲ ಸೌಲಭ್ಯದ ನೆರವು ಪಡೆಯುತ್ತಿದ್ದಾರೆ. ದೇಶದಲ್ಲಿ ರೈತರು ಸಾಲ ಮರುಪಾವತಿಸಲು ಸಾಧ್ಯವಾಗದೆ ಅತ್ಮಹತ್ಯೆ ಮಾಡದ ಜಿಲ್ಲೆಗಳೆಂದರೆ ನಮ್ಮ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ. ಕೊರೋನಾ ಸಂಪೂರ್ಣ ನಿರ್ಮೂಲನೆಯಾದರೆ ಮಹಿಳೆಯರಿಗೆ ಹೊಸ ಸೀರೆ ಕೊಡುವುದಾಗಿ ಹೇಳಿದ್ದೆ. ಆ ಭರವಸೆಯನ್ನು ಈ ಬಾರಿ ಪೂರೈಸಿದ್ದೇನೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನವೋದಯ ಸ್ವಸಹಾಯ ಸಂಘಗಳು ಯಶಸ್ವಿಯಾಗಿ ಮುನ್ನಡೆಯುತ್ತಿದ್ದರೆ ಅದಕ್ಕೆ ಗುಂಪಿನ ಸದಸ್ಯರೆಲ್ಲರ ಸಂಘಟನೆ ಕಾರಣ. ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಸಾಲ ಪಡೆದು ಮಕ್ಕಳಿಗೆ ಶಿಕ್ಷಣ ಕೊಡಿಸಿ ಅವರನ್ನು ಮುಂದಿನ ದಿನಗಳಲ್ಲಿ ಸಾಧಕರ ಪಟ್ಟಿಯಲ್ಲಿ ಗುರುತಿಸುವಂತೆ ಮಾಡಿ” ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಉದ್ಯಮಿ ನಾಡೋಜ ಡಾ. ಜಿ. ಶಂಕರ್, ಅಪೆಕ್ಸ್ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ. ಎನ್. ದೇವರಾಜ್, ಕೆನರಾ ಲ್ಯಾಂಡ್ ಇನ್ ವೆಸ್ಟ್ ಮೆಂಟ್ಸ್ ಲಿ ಮಣಿಪಾಲ ಇದರ ವ್ಯವಸ್ಥಾಪಕ ನಿರ್ದೇಶಕರ ಟಿ. ಅಶೋಕ್ ಪೈ , ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಬಾರ್ಡ್ ಡಿಡಿಎಂ ಸಂಗೀತಾ ಕರ್ತಾ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ದ.ಕ.ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ ಪಾಲ್ ಎ. ಸುವರ್ಣ, ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದಿನಕರ್ ಶೆಟ್ಟಿ ಹೆರ್ಗ, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉದ್ಯಮಿ ಪುರುಷೋತ್ತಮ್ ಶೆಟ್ಟಿ, ಎಸ್ ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಿ., ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ ಬೆಳಪು, ಭಾಸ್ಕರ್ ಎಸ್. ಕೋಟ್ಯಾನ್, ಟಿ.ಜಿ. ರಾಜಾರಾಮ್ ಭಟ್, ಬಿ. ಎಸ್. ರಾಜು ಪೂಜಾರಿ, ಶಶಿಕುಮಾರ್ ರೈ ಬಿ., ಎಂ. ಮಹೇಶ್ ಹೆಗ್ಡೆ, ಕೆ. ಹರಿಶ್ಚಂದ್ರ, ಜೈರಾಜ್ ಬಿ. ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಸದಾಶಿವ ಉಳ್ಳಾಲ್, ಪ್ರವೀಣ್ ಬಿ ನಾಯಕ್, ಬಿ.ಅಶೋಕ್ ಕುಮಾರ್ ಶೆಟ್ಟಿ, ರಾಜೇಶ್ ರಾವ್, ಬಿ. ಜಯರಾಮ್ ರೈ ಮಹಾಪ್ರಬಂಧಕ ಗೋಪಿನಾಥ್ ಭಟ್, ನವೋದಯ ಟ್ರಸ್ಟ್ ಸಿಇಓ ಪೂರ್ಣಿಮಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿದರು, ಬಿ.ಅಶೋಕ್ ಕುಮಾರ್ ಶೆಟ್ಟಿ ವಂದಿಸಿದರು. ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.












