ಚಿಕ್ಕಮಗಳೂರು: ಪೊಲೀಸ್ ಇಲಾಖೆಯಲ್ಲಿ ದಕ್ಷ ಹಾಗೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಎನ್.ಎಸ್.ಶೃತಿ ಅವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ವಿವಿಧ ಪಕ್ಷದ ಮುಖಂಡರು ಹಾಜರಿದ್ದರು.
ಗೌರವ ಸ್ವೀಕರಿಸಿ ಮಾತನಾಡಿದ ಶೃತಿ, ಜಿಲ್ಲೆಯು ಶಾಂತಿಪ್ರಿಯವಾಗಿದ್ದು ಇಲ್ಲಿ ಸುಮಾರು ಮೂರು ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಕರ್ತವ್ಯ ನಿರ್ವಹಿಸುತ್ತಿರುವುದು ಖುಷಿ ತಂದಿದೆ. ಹಿಂದೂ-ಮುಸ್ಲಿಂ ಸಮುದಾಯದವರು ಜಿಲ್ಲೆಯಲ್ಲಿ ಉತ್ತಮ ಬಾಂಧವ್ಯ ಹೊಂದಿರುವುದು ಹೆಮ್ಮೆ ತಂದಿದೆ ಎಂದರು.
ಕೆಪಿಸಿಸಿ ರಾಜ್ಯ ವಕ್ತಾರ ಹೆಚ್.ಹೆಚ್.ದೇವರಾಜ್ ಮಾತನಾಡಿ, ಪೊಲೀಸ್ ಅಧೀಕ್ಷಕಿ ಶೃತಿ ಅವರ ವರ್ಗಾವಣೆ ಮನಸ್ಸಿಗೆ ಬೇಸರ ತಂದಿದೆ. ಪ್ರಾಮಾಣಿಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಇನ್ನೂ ಹೆಚ್ಚು ಸಮಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಬೇಕಿತ್ತು. ವರ್ಗಾವಣೆಯಾಗಿ ಎಲ್ಲಿ ತೆರಳಿದರೂ ನಮ್ಮ ಜಿಲ್ಲೆಯ ಮಗಳೆಂದು ಭಾವಿಸಬೇಕು ಎಂದರು.
ಕಾಂಗ್ರೆಸ್ ವಕ್ತಾರ ರವೀಶ್ ಬಸಪ್ಪ ಮಾತನಾಡಿ, ಜಿಲ್ಲೆಯಲ್ಲಿ ವಿವಿಧ ಪ್ರಕಣಗಳನ್ನು ಭೇದಿಸಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಹಾಗೂ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ಜೆಡಿಎಸ್ ಮಾಜಿ ಅಧ್ಯಕ್ಷ ಹೆಚ್.ಎಸ್. ಮಂಜಪ್ಪ, ಸಿಪಿಐ ಮುಖಂಡರಾದ ರಾಧಾ ಸುಂದ್ರೇಶ್ ಹಾಜರಿದ್ದರು.












