ಮಣಿಪಾಲ: 22 ಸದಸ್ಯ ರಾಷ್ಟ್ರಗಳೊಂದಿಗೆ ಯುನೈಟೆಡ್ ಕಿಂಗ್ಡಂನ ಲಿವರ್ಪೂಲ್ ವಿಶ್ವವಿದ್ಯಾನಿಲಯದಲ್ಲಿರುವ ಯುರೋಪ್ ಮೂಲದ ಸಂಸ್ಥೆಯಾದ ಇಂಟರ್ನ್ಯಾಶನಲ್ ಕೋಲಾಬರೇಟಿವ್ ಕೋಆರ್ಡಿನೇಟಿಂಗ್ ಸೆಂಟರ್ ನಿಂದ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಉಪಶಾಮಕ ಆರೈಕೆಗಾಗಿ ಅಂತರರಾಷ್ಟ್ರೀಯ ಕೇಂದ್ರವೆಂದು ಮನ್ನಣೆ ಪಡೆದಿದೆ. ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಈ ಮನ್ನಣೆಯನ್ನು ಪಡೆದ ಭಾರತದ ಮೊದಲ ಮತ್ತು ಏಕೈಕ ಸಂಸ್ಥೆಯಾಗಿದೆ.
ಮಾಹೆ ಮಣಿಪಾಲ ಸಹ ಕುಲಾಧಿಪತಿಗಳಾದ ಡಾ ಎಚ್ ಎಸ್ ಬಲ್ಲಾಳ್ ಮತ್ತುಮಾಹೆ ಮಣಿಪಾಲದ ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಅವರು ಜಂಟಿಯಾಗಿ ಕೆಎಂಸಿ ಡೀನ್ ಡಾ. ಶರತ್ ಕೆ ರಾವ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿ, ಮತ್ತು ಮುಖ್ಯ ನಿರ್ವಹಣಾಧಿಕಾರಿ ಶ್ರೀ ಸಿ ಜಿ ಮುತ್ತನ್ನ ಅವರಿಗೆ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು. ಮಾಹೆ ಮಣಿಪಾಲದ ಸಹ ಕುಲಪತಿಗಳಾದ (ಆರೋಗ್ಯ ವಿಜ್ಞಾನಗಳ ವಿಭಾಗ) ಡಾ.ಪಿ.ಎಲ್.ಎನ್.ಜಿ.ರಾವ್ ಮತ್ತು ಡಾ. ವೆಂಕಟ್ರಾಯ ಎಂ ಪ್ರಭು (ಆರೋಗ್ಯ ವಿಜ್ಞಾನ), ಕುಲಸಚಿವರಾದ ಡಾ.ನಾರಾಯಣ ಸಭಾಹಿತ್, ಮತ್ತು ಉಪಶಾಮಕ ಔಷಧ ಮತ್ತು ಸಹಾಯಕ ಆರೈಕೆ ವಿಭಾಗದ ವೈದ್ಯಕೀಯ ತಂಡದವರು ಉಪಸ್ಥಿತರಿದ್ದರು.
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಈ ಮನ್ನಣೆಯು ಅದರ ಮುಂದುವರಿದ ವೈದ್ಯಕೀಯ ಕಾರ್ಯ, ರಾಷ್ಟ್ರೀಯ-ಮಟ್ಟದ ನೀತಿಗಳು, ಮಾರ್ಗಸೂಚಿಗಳು ಮತ್ತು ಉಪಶಾಮಕ ಮತ್ತು ಜೀವನದ ಅಂತ್ಯದ ಆರೈಕೆಯಲ್ಲಿನ ಸಂಶೋಧನೆಗಾಗಿ ದೊರೆತಿದೆ. 2019 ರಲ್ಲಿ, ಕಸ್ತೂರ್ಬಾ ಆಸ್ಪತ್ರೆಯು ಬ್ಲೂ ಮ್ಯಾಪ್ಲ್ ಎಂಬ ಶೀರ್ಷಿಕೆಯಡಿ ಐತಿಹಾಸಿಕ, ಕಾರ್ಯವಿಧಾನದ ಮಾರ್ಗದರ್ಶಿ ದಾಖಲೆಯನ್ನು ಬಿಡುಗಡೆ ಮಾಡಿತ್ತು, ಇದು ಭಾರತದಾದ್ಯಂತ ಹಲವಾರು ಸಂಸ್ಥೆಗಳು ಮತ್ತು ಇನ್ಸ್ಟಿಟ್ಯೂಟ್ ಗಳು ತಮ್ಮ ದಾಖಲೆಗಳನ್ನು ಅಳವಡಿಸಿಕೊಳ್ಳಲು ಮತ್ತು ಅಭಿವೃದ್ಧಿಪಡಿಸಲು ಅವಕಾಶ ಮಾಡಿಕೊಟ್ಟಿತು. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಕ್ರಿಟಿಕಲ್ ಕೇರ್ ರಿವ್ಯೂ ಬೋರ್ಡ್ (CCRB) ಮತ್ತು ವೈದ್ಯಕೀಯ ಸಲಹೆಯ ವಿರುದ್ಧ ಬಿಡುಗಡೆ (DAMA) ಗಾಗಿ ಪ್ರೋಟೋಕಾಲ್ ಗಳನ್ನು ಪ್ರಾರಂಭಿಸಿದ ಭಾರತದ ಮೊದಲ ಆಸ್ಪತ್ರೆಯಾಗಿದೆ. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಕೋವಿಡ್ ಸಮಯದಲ್ಲಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಕೋವಿಡ್ ರೋಗಿಗಳಿಗೆ ಕೋವಿಡ್ ಆರೈಕೆ ಯೋಜನೆ ಅಭಿವೃದ್ಧಿ ಪಡಿಸಿದ ಅನುಕರಣೀಯ ಕಾರ್ಯವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿತ್ತು ಮತ್ತು ಸಂಶೋಧನಾ ಕಾರ್ಯವಾಗಿ ಪ್ರಕಟವಾಯಿತ್ತು.
ಈ ಸಂದರ್ಭದಲ್ಲಿ ಡಾ.ಎಂ.ಡಿ.ವೆಂಕಟೇಶ್ ಮಾತನಾಡಿ, ‘‘ಮಣಿಪಾಲದಂತಹ ಸಣ್ಣ ನಗರದಲ್ಲಿ ಕುಳಿತು ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮನ್ನಣೆ, ಪ್ರಶಸ್ತಿ ಪಡೆಯುವುದು ಸುಲಭವಲ್ಲ. ಇದನ್ನೆಲ್ಲಾ ಮೀರಿ ಉಪಶಮನಕಾರಿ ಔಷಧ ವಿಭಾಗ ಮತ್ತು ಆಸ್ಪತ್ರೆಯ ತಂಡವು ಅದ್ಭುತ ಕೆಲಸ ಮಾಡಿದೆ. ಈ ಸಾಧನೆಗಾಗಿ ನಾನು ಇಡೀ ತಂಡದ ಕೆಲಸವನ್ನು ಅಭಿನಂದಿಸುತ್ತೇನೆ. ಈ ಮನ್ನಣೆಯಿಂದ ಮಾರಣಾಂತಿಕ ಮತ್ತು ತೀವ್ರವಾಗಿ ಅಸ್ವಸ್ಥರಾಗಿರುವ ರೋಗಿಗಳ ಆರೈಕೆಯಲ್ಲಿ ನೀತಿಗಳು ಮತ್ತು ಕಾರ್ಯ ವಿಧಾನದ ಮಾರ್ಗಸೂಚಿಗಳು, ಗುಣಮಟ್ಟದ ಭರವಸೆ, ಅಭಿಯಾನ, ಶಿಕ್ಷಣ ಮತ್ತು ತರಬೇತಿ ಚಟುವಟಿಕೆಗಳನ್ನು ನಡೆಸುವುದು, ಸಂಶೋಧನೆ ಮತ್ತು ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಲು ಸಾಧ್ಯವಾಗುತ್ತದೆ. ಉಪಶಾಮಕ ಆರೈಕೆಯ ವಿತರಣೆಯಲ್ಲಿ ಇತರ ಸಂಸ್ಥೆಗಳ ಸಾಮರ್ಥ್ಯ ವೃದ್ಧಿ ಸಾಧ್ಯವಾಗಲಿದೆ. ಈ ಪ್ರಶಸ್ತಿಯು ಕಸ್ತೂರ್ಬಾ ಆಸ್ಪತ್ರೆಯ ಆರೋಗ್ಯ ಕ್ಷೇತ್ರದ ಸ್ಥಿರ ಶ್ರೇಷ್ಠತಾ ಸೇವೆಗೆ ಮಹತ್ವದ ಮೈಲಿಗಲ್ಲು ಎಂದರು.
ತಂಡವನ್ನು ಅಭಿನಂದಿಸಿದ ಮಾತನಾಡಿದ ಡಾ. ಬಲ್ಲಾಳ್ ಅವರು “ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು, ಸಂಘಟಿತ ಐಸಿಯು ಉಪಶಾಮಕ ಆರೈಕೆ ಕ್ರಮವನ್ನು ಹೊಂದಿರುವ ಭಾರತದ ಏಕೈಕ ಆಸ್ಪತ್ರೆಯಾಗಿದೆ. ಇದರಿಂದ ಮಣಿಪಾಲವು 2022 ರಿಂದ ಏಷ್ಯಾ ಪೆಸಿಫಿಕ್ ಪ್ರದೇಶದ ಐಸಿಯು-ಪಾಲಿಯೇಟಿವ್ ಕೇರ್ ವಿಶೇಷ ಆಸಕ್ತಿ ಗುಂಪಿನ ನಾಯಕತ್ವದ ಪಾತ್ರವನ್ನು ವಹಿಸಲು ಸಾಧ್ಯವಾಗಲಿದೆ. ಕೆಎಂಸಿ ಮಣಿಪಾಲವು ಎಂಡಿ ಇನ್ ಪ್ಯಾಲಿಯೇಟಿವ್ ಮೆಡಿಸಿನ್ ಅನ್ನು ಪ್ರಾರಂಭಿಸಿದ ಭಾರತದ ಮೊದಲ ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಏಕೈಕ ವೈದ್ಯಕೀಯ ಕಾಲೇಜು” ಎಂದರು.