ಬೆಂಗಳೂರು: ಹಿಜಾಬ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ತ್ರಿಸದಸ್ಯ ಪೀಠದ ಭಾಗವಾಗಿರುವ ನ್ಯಾಯಾಧೀಶರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಸಂದೇಶಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಕನ್ನಡ ನಟ ಮತ್ತು ಹೋರಾಟಗಾರ ಚೇತನ್ ಕುಮಾರ್ ಅಹಿಂಸನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.
ನಟನನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಪೊಲೀಸರು ನಟನ ವಿರುದ್ಧ ಐಪಿಸಿ ಸೆಕ್ಷನ್ 505 (ಸಾರ್ವಜನಿಕ ಕಿಡಿಗೇಡಿತನದ ಹೇಳಿಕೆಗಳು) ಮತ್ತು 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಸ್ವಯಂಪ್ರೇರಿತ ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ.
ಅಮೇರಿಕಾ ನಾಗರಿಕತ್ವವನ್ನು ಹೊಂದಿರುವ ಚೇತನ್, ಹಿಜಾಬ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ತ್ರಿಸದಸ್ಯ ಪೀಠದ ಭಾಗವಾಗಿರುವ ನ್ಯಾಯಾಧೀಶ ಎಸ್.ಕೃಷ್ಣ ದೀಕ್ಷಿತ್ ಅವರ ಬಗ್ಗೆ ಈ ಹಿಂದೆ ಟ್ವೀಟ್ ಮಾಡಿರುವ ಅವಹೇಳನಕಾರಿ ಸಂದೇಶಗಳನ್ನು ರೀಟ್ವೀಟ್ ಮಾಡಿದ್ದಾರೆ. ತಮ್ಮ ಎರಡು ವರ್ಷಗಳ ಹಿಂದಿನ ಟ್ವೀಟ್ನಲ್ಲಿ ಅತ್ಯಾಚಾರ ಪ್ರಕರಣದ ಆರೋಪಿಗೆ ಜಾಮೀನು ನೀಡುವುದರ ಕುರಿತು ಪ್ರತಿಕ್ರಿಯಿಸಿದ್ದ ಅವರು ನ್ಯಾಯಾಧೀಶರ ಹೇಳಿಕೆಗಳಿಗೆ ಆಕ್ಷೇಪಿಸಿದ್ದರು.
ಅದೇ ಸಂದೇಶವನ್ನು ಮರುಟ್ವೀಟ್ ಮಾಡಿದ ನಂತರ ಅತ್ಯಾಚಾರ ಪ್ರಕರಣದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿರುವ ನ್ಯಾಯಾಧೀಶರು ಹಿಜಾಬ್ ಪ್ರಕರಣವನ್ನು ಪರಿಶೀಲಿಸುತ್ತಿದ್ದಾರೆ ಎಂದಿರುವ ಚೇತನ್ ನ್ಯಾಯಾಧೀಶರಿಗೆ ಈ ವಿಚಾರದಲ್ಲಿ ಸ್ಪಷ್ಟತೆ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಈ ಟ್ವೀಟ್ ಆಧರಿಸಿ ಶೇಷಾದ್ರಿಪುರಂ ಪೊಲೀಸರು ಅವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.