ಉಡುಪಿ: ಉಡುಪಿ ರಾಷ್ಟ್ರಕವಿ ಗೋವಿಂದಪೈ ಸಂಶೋಧನ ಕೇಂದ್ರ, ಮಣಿಪಾಲದ ಉನ್ನತ ಶಿಕ್ಷಣ ಅಕಾಡೆಮಿ ಹಾಗೂ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಗಮಕ ಕಲಾವಿದೆ ಗಂಗಮ್ಮ ಕೇಶವಮೂರ್ತಿ ಅವರಿಗೆ ‘ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಆ ಬಳಿಕ ಮಾತನಾಡಿದ ಗಂಗಮ್ಮ ಅವರು, ಆಂಗ್ಲ ಭಾಷೆಯ ಪ್ರಭಾವದಿಂದಾಗಿ ಇಂದಿನ ಯುವಕರಲ್ಲಿ ಕನ್ನಡ ಭಾಷೆಯ ಶುದ್ಧತೆ ಇಲ್ಲ.
ಹಾಗಾಗಿ ಗಮಕ ಕಲೆ ಬೆಳೆಸುವುದು ತುಂಬಾ ಕಷ್ಟವಾಗಿದೆ. ಯುವಕರು ಗಮಕ ಕಲಿಯಲು ಮುಂದೆ ಬರಬೇಕು. ಗಮಕ ಕಲಿತವರು ಇತರರಿಗೆ ಕಲಿಸಿದರೆ, ಗಮಕವನ್ನು ಉಳಿಸಿಬೆಳೆಸಲು ಸಾಧ್ಯವಿದೆ ಎಂದರು.
ಗಮಕ ಕಲೆ ಇನ್ನೂ ಸತ್ತು ಹೋಗಿಲ್ಲ. ಆದರೆ ಅದನ್ನು ಉಳಿಸಿಬೆಳೆಸಲು ಪ್ರತಿಯೊಬ್ಬರು ಆಸಕ್ತಿ ತೋರುವ ಅಗತ್ಯವಿದೆ ಎಂದು ಹೇಳಿದರು.
ಗಮಕ ಕಲಾವಿದ ಸತೀಶ್ ಕುಮಾರ್ ಕೆಮ್ಮಣ್ಣು ಮಾತನಾಡಿ, ಗಮಕ ಪಠ್ಯ ಪುಸ್ತಕಗಳಲ್ಲಿ ಲಭ್ಯವಿಲ್ಲ. ಆದ್ದರಿಂದ ಯುವಜನ ಗಮಕ ಕಲೆಯಿಂದ ದೂರ ಆಗಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಗಮಕ ಕಲಿಸಲು ಕನ್ನಡ ಸಂಘಗಳು ಮುಂದೆ ಬರಬೇಕು. ಸಂಗೀತ ಶಿಕ್ಷಕರು ಗಮಕವನ್ನು ಪಸರಿಸುವ ಕೆಲಸ ಮಾಡಬೇಕು. ಗಮಕ ಕಲೆಗೆ ಪ್ರೋತ್ಸಾಹ ನೀಡುವ ಕಾರ್ಯ ಆಗಬೇಕಾಗಿದೆ ಎಂದರು.
ಚಿಂತಕ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಅಧ್ಯಕ್ಷತೆಯನ್ನು ವಹಿಸಿದ್ದರು. ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ನ ಆಡಳಿತಾಧಿಕಾರಿ ಡಾ. ಎಚ್. ಶಾಂತಾರಾಮ್, ಮನೋರಮಾ ಎಂ. ಭಟ್, ಪ್ರೊ. ಎಂ.ಎಲ್. ಸಾಮಗ ಉಪಸ್ಥಿತರಿದ್ದರು. ಕೇಂದ್ರದ ಸಂಯೋಜನಾಧಿಕಾರಿ ಪ್ರೊ. ವರದೇಶ ಹಿರೇಗಂಗೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ನರಸಿಂಹ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು.