ಚಿತ್ರದುರ್ಗ: ಬಾಲಕೋಟ್ ಮೇಲಿನ ವಾಯು ದಾಳಿಯಿಂದ ಪಾಕಿಸ್ತಾನಕ್ಕೆ ನೋವು ಆಗಿದೆಯೋ ಗೊತ್ತಿಲ್ಲ. ಇಲ್ಲಿಯ ಜೆಡಿಎಸ್ ಮತ್ತು ಕಾಂಗ್ರೆಸ್ ತುಂಬಾನೇ ನೋವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಚಿತ್ರ ದುರ್ಗದ ಬಿಜೆಪಿ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಐದು ವರ್ಷಗಳ ಹಿಂದೆ ನೀವು ನೀಡಿದ್ದ ಅಧಿಕಾರದಿಂದ ದೇಶದೆಲ್ಲೆಡೆ ಹಿಂದೂಸ್ತಾನದ ಘೋಷಣೆಗಳು ಕೇಳುತ್ತಿವೆ. ಈ ಮೊದಲು ನೆರೆಯ ವೈರಿ ಪಾಕಿಸ್ತಾನ ನಮಗೆ ಬೆದರಿಕೆ ಹಾಕುತ್ತಿದ್ದವು. ಅಂದಿನ ಸರ್ಕಾರಗಳು ಯಾವುದೇ ಕ್ರಮಕೈಗೊಳ್ಳುತ್ತಿರಲಿಲ್ಲ. ಇಂದು ಧಮ್ಕಿ ಹಾಕುತ್ತಿದ್ದವರ ಧ್ವನಿ ನಮ್ಮ ದೇಶದಲ್ಲಿ ಕೇಳದಂತೆ ಮಾಡಿದ್ದೇವೆ ಎಂದರು.
ಕೇವಲ ಒಬ್ಬ ಸಂಸದನನ್ನು ಆಯ್ಕೆ ಮಾಡದೇ ಒಂದು ಸದೃಢ ಸರ್ಕಾರಕ್ಕೆ ನೀವು ಮತ ನೀಡಬೇಕಿದೆ. ದೇಶದ ರಕ್ಷಣೆಗಾಗಿ ಬಲಿಷ್ಠ ನಿರ್ಣಯ ತೆಗೆದುಕೊಳ್ಳುವ ಸರ್ಕಾರಕ್ಕೆ ನೀಡಬೇಕಿದೆ ಎಂದು ಮನವಿ ಮಾಡಿಕೊಂಡರು.
ಕರ್ನಾಟಕ ಸರ್ಕಾರದ ರಿಮೋಟ್ ದೆಹಲಿಯ 12 ಜನರ ಕೈಯಲ್ಲಿದೆ. ಕರ್ನಾಟಕದಲ್ಲಿ ಲಿಂಗಾಯತ ಸಮುದಾಯವನ್ನು ಒಡೆಯುವ ಕೆಲಸವನ್ನು ವಿಧಾನಸಭಾ ಚುನಾವಣೆಯಲ್ಲಿ ಪ್ರಯತ್ನ ಮಾಡಿದರು. ಇಲ್ಲಿಯ ನಾಯಕರಿಗೆ ದೇಶದ ಚಿಂತೆ ಇಲ್ಲ ಮತ್ತು ಸಂವಿಧಾನದ ಬಗ್ಗೆ ಗೌರವ ಸಹ ಇಲ್ಲ ಎಂದರು.