ಕರಾವಳಿ ಜಿಲ್ಲೆಯ ಕಾಲೇಜುಗಳಲ್ಲಿ ಮತೀಯವಾದಿ ಸಂಘಟನೆಗಳ ಪ್ರಾಯೋಜಕತ್ವದಲ್ಲಿ ಒಂದು ತಿಂಗಳಿಂದ ಸೃಷಿಯಾಗಿರುವ ಹಿಜಾಬ್ ವಿವಾದದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಮೆಹಬೂಬ್ ಮುಫ್ತಿ ಅವರ ಬಿಟ್ಟಿ ಉಪದೇಶದ ಅಗತ್ಯವಿಲ್ಲ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.
ಸದಾ ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಂದುತ್ವ ಹಾಗೂ ಹಿಂದೂ ಕಾರ್ಯಕರ್ತರನ್ನು ಟೀಕಿಸುವುದನ್ನೇ ಚಟವಾಗಿರಿಸಿ ಕೊಂಡಿರುವ ಸಿದ್ದರಾಮಯ್ಯ, ಕಾಶ್ಮೀರದಲ್ಲಿ ಮುಖ್ಯಮಂತ್ರಿಯಾಗಿ ಶರಿಯಾ ಕಾನೂನಿನನಂತೆ ಮಹಿಳೆಯರ ಹಕ್ಕುಗಳನ್ನು ದಮನಗೊಳಿಸಿ ಆಡಳಿತ ನಡೆಸಿದ್ದ ಮೆಹಬೂಬ ಮುಫ್ತಿ ಈ ಹಿಜಾಬ್ ವಿವಾದದ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಲು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ತನ್ನ ಅಧಿಕಾರಾವಧಿಯಲ್ಲಿ ಸಾಲು ಸಾಲು ಹಿಂದೂ ಕಾರ್ಯಕರ್ತರ ಕಗ್ಗೊಲೆಯಾದಾಗ ದಿವ್ಯ ಮೌನ ತಾಳಿದ್ದ ಸಿದ್ದರಾಮಯ್ಯ ಇದೀಗ ಹಿಜಾಬ್ ಪರ ವಕಾಲತ್ತು ವಹಿಸಿ ಕರಾವಳಿ ಜಿಲ್ಲೆಯಲ್ಲಿ ಉಂಟಾಗಿರುವ ವಿವಾದದ ಬೆಂಕಿಗೆ ತುಪ್ಪ ಸುರಿಯುವಲ್ಲಿ ಮಗ್ನರಾಗಿದ್ದಾರೆ ಎಂದು ಕಿಡಿಕಾರಿದರು.
ಶಿಕ್ಷಣ ವಿಚಾರದಲ್ಲಿ ವಿಶ್ವದಲ್ಲೇ ಹೆಸರುವಾಸಿಯಾಗಿರುವ ಕರಾವಳಿ ಜಿಲ್ಲೆಯ ಘನತೆಗೆ ಧಕ್ಕೆ ತರಲು ವ್ಯವಸ್ಥಿತ ಯೋಜನೆ ರೂಪಿಸಿರುವ ಮತೀಯವಾದಿ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವ ಸಿದ್ದರಾಮಯ್ಯಗೆ ಕರಾವಳಿಯ ಜನತೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
















