ಕುಂದಾಪುರ: ಇಲ್ಲಿನ ಆರ್.ಎನ್ ಶೆಟ್ಟಿ ಮಿನಿ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಗಫೂರ್ ಭಾಷಣಕ್ಕೆ ಕಾಂಗ್ರೆಸ್ ಕಾರ್ಯಕರ್ತರೆ ಅಡ್ಡಿಮಾಡಿದ ಘಟನೆ ನಡೆದಿದೆ.
ಕಾರ್ಯಕರ್ತರ ಸಮಾವೇಶದಲ್ಲಿ ಗಫೂರ್ ಭಾಷಣ ಆರಂಭಿಸುತ್ತಿದ್ದಂತೆ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಆಗಮಿಸಿದ್ದು, ನೆರೆದಿದ್ದ ಕಾರ್ಯಕರ್ತರಿಗೆ ಹಸ್ತಲಾಘವ ನೀಡಿ ಕುಶಲೋಪಹರಿ ವಿಚಾರಿಸುತ್ತಿದ್ದರು. ಈ ವೇಳೆಯಲ್ಲಿ ಭಾಷಣ ನಿಲ್ಲಿಸಿದ ಗಫೂರ್ ಪ್ರಮೋದ್ ಮಧ್ವರಾಜ್ ಅವರನ್ನು ಬರಮಾಡಿಕೊಂಡರು. ಮತ್ತೆ ಗಫೂರ್ ಭಾಷಣ ಆರಂಭಿಸುತ್ತಿದ್ದಂತೆ ಸಭಿಕರ ಸಾಲಿನಲ್ಲಿ ಕೂತ ಕಾಂಗ್ರೆಸ್ ಕಾರ್ಯಕರ್ತ ಚೋರಾಡಿ ಅಶೋಕ್ ಶೆಟ್ಟಿ ಎದ್ದುನಿಂತು ಗಫೂರ್ ಕೈಯ್ಯಲ್ಲಿರುವ ಮೈಕ್ ಪಡೆದು ಮಾತನಾಡಲು ಆರಂಭಿಸಿದರು.
ಭಾಷಣ ಮಾಡಲು ಅಯೋಗ್ಯರು ನೀವು: ಗಫೂರ್ಗೆ ಛೀಮಾರಿ
ಪ್ರಾಮಾಣಿಕ ರಾಜಕಾರಣಿ ಪ್ರತಾಪಚಂದ್ರ ಶೆಟ್ಟಿಯವರ ಬಗ್ಗೆ ಉಡುಪಿಯಲ್ಲಿ ನಡೆದ ಸಭೆಯಲ್ಲಿ ನೀವು ಹಗುರವಾಗಿ ಮಾತನಾಡಿದ್ದೀರಿ. ಕುಂದಾಪುರದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಪ್ರತಾಪಚಂದ್ರ ಶೆಟ್ಟರ ಕ್ಷೇತ್ರದಲ್ಲಿ ನಿಮಗೆ ನಾವು ಭಾಷಣ ಮಾಡಲು ಬಿಡೋದಿಲ್ಲ. ನೀವು ಕುಂದಾಪುರ ಬ್ಲಾಕ್ನಲ್ಲಿ ಭಾಷಣ ಮಾಡಲು ಅಯೋಗ್ಯ ವ್ಯಕ್ತಿ. ನಿಮ್ಮಂತಹ ರಾಜಕಾರಣಿಗಳು ನಾವಲ್ಲ. ನಮ್ಮ ಪಕ್ಷನಿಷ್ಠೆಯನ್ನು ಪರೀಕ್ಷೆ ಮಾಡಲು ಬರಬೇಡಿ. ಇನ್ನುಮುಂದೆ ಈ ರೀತಿಯಾಗಿ ವರ್ತಿಸಿದರೆ ನಿಮಗೆ ಘೇರಾವ್ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದಕ್ಕೆ ಸಭಿಕರ ಸಾಲಿನಲ್ಲಿ ಕೂತ ಕೆಲ ಕಾರ್ಯಕರ್ತರು ಧ್ವನಿಗೂಡಿಸಿ ಪಕ್ಷವನ್ನು ಕಟ್ಟಿ ಬೆಳೆಸಿದ ಆಸ್ಕರ್ ಫೆರ್ನಾಂಡೀಸ್ ಹಾಗೂ ಪ್ರತಾಪಚಂದ್ರ ಶೆಟ್ಟಿಯವರನ್ನು ಕಡೆಗಣಿಸಿದರೆ ನಾವು ಸುಮ್ಮನಿರೋದಿಲ್ಲ ಎಂದರು. ಈ ವೇಳೆಯಲ್ಲಿ ಗಫೂರ್ ಏನನ್ನೂ ಪ್ರತಿಕ್ರಿಯಿಸದೆ ಸುಮ್ಮನೆ ಕೂತು ತಮ್ಮ ಭಾಷಣವನ್ನು ನಿಲ್ಲಿಸಿದರು.
ಉಸ್ತುವಾರಿ ಮಧ್ಯಪ್ರವೇಶ:
ಒಂದು ಪಕ್ಷ ಅಂದಮೇಲೆ ಅನೇಕ ಭಿನ್ನಾಭಿಪ್ರಾಯಗಳಿರುತ್ತದೆ. ಕಾರ್ಯಕರ್ತರಾದ ನೀವುಗಳು ಹಗಲುರಾತ್ರಿ ದುಡಿದು ಪಕ್ಷವನ್ನು ಕಟ್ಟಿದ್ದೀರಿ. ಪಕ್ಷ ದೊಡ್ದೆ ವಿನಃ ನಾವ್ಯಾರು ದೊಡ್ಡವರಲ್ಲ. ನಮ್ಮಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಸರಿಪಡಿಸಿಕೊಂಡು ಹೋಗೋಣ. ವೇದಿಕೆಯಲ್ಲಿ ಕೂರುವವರ ಸಂಖ್ಯೆ ಯಾವತ್ತೂ ಕಡಿಮೆ. ಆದರೆ ವೇದಿಕೆಯ ಮುಂಭಾಗದಲ್ಲಿ ಕೂರುವವರ ಸಂಖ್ಯೆ ಹೆಚ್ಚಿರುವುದರಿಂದ ನನಗೆ ಕಾರ್ಯಕರ್ತರ ಮೇಲೆ ನಂಬಿಕೆಯಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನಾವೆಲ್ಲರೂ ಒಗ್ಗಟ್ಟಾಗಿ ದುಡಿಯೋಣ. ಪ್ರತಾಪಚಂದ್ರ ಶೆಟ್ಟಿಯವರು ಇಂದು ದೊಡ್ಡ ಸ್ಥಾನದಲ್ಲಿದ್ದಾರೆ ಎಂದು ಪ್ರತಾಪಚಂದ್ರ ಶೆಟ್ಟರನ್ನು ಉಸ್ತುವಾರಿ ಸಚಿವೆ ಹಾಡಿಹೊಗಳಿದಾಗ ಕಾರ್ಯಕರ್ತರೆಲ್ಲರೂ ಚಪ್ಪಾಳೆ ತಟ್ಟಿ ಘೋಷಣೆಗಳನ್ನು ಕೂಗಿ ಖುಷಿಪಟ್ಟರು. ಸಭೆಯಲ್ಲಿ ಇಷ್ಟೆಲ್ಲಾ ಘಟನೆಗಳು ನಡೆಯುತ್ತಿರುವಾಗಲೂ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಏನೂ ನಡೆದಿಲ್ಲವೆಂಬಂತೆ ಕಾರ್ಯಕರ್ತರಿಗೆ ಹಸ್ತಲಾಘವ ಕೊಡುವುದರಲ್ಲಿ ತಲ್ಲೀನರಾಗಿರುವುದು ಕಂಡುಬಂದಿತು.