ಕಾರ್ಕಳ: ತಲೆನೋವಿನಿಂದ ಬಳಲುತ್ತಿದ್ದ ಯುವತಿ ಮೃತ್ಯು

ಕಾರ್ಕಳ: ತಲೆನೋವಿನಿಂದ ಬಳಲುತ್ತಿದ್ದ ಯುವತಿಯೊಬ್ಬಳು ಹಠಾತ್ ಆಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ನೀರೆ ಗ್ರಾಮದ ಬಾರೆಜಡ್ಡು ಎಂಬಲ್ಲಿ ನಡೆದಿದೆ.

ನೀರೆ ಗ್ರಾಮದ ಶಿವರಾಮ ಆಚಾರ್ಯ ಅವರ ಮಗಳು 18 ವರ್ಷದ ಶರಣ್ಯ ಮೃತ ಯುವತಿ. ಶರಣ್ಯಳಿಗೆ 12 ದಿನಗಳ ಹಿಂದೆ ತಲೆನೋವು ಕಾಣಿಸಿಕೊಂಡಿತ್ತು. ಬಳಿಕ ಮನೆಯವರು ಆಕೆಯನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿಕೊಂಡು ಬಂದಿದ್ದರು. ಜ.9 ರಂದು ಸಂಜೆ 4ಗಂಟೆಗೆ ಮತ್ತೆ ತಲೆನೋವು ಕಾಣಿಸಿಕೊಂಡಿದೆ. ಬಳಿಕ ವಾಂತಿ ಮಾಡಿಕೊಂಡು ಅಸ್ವಸ್ಥಳಾಗಿದ್ದ ಆಕೆಯನ್ನು ಕಾರ್ಕಳ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.

ಅದರಂತೆ ಸಂಜೆ 7 ಗಂಟೆಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಶರಣ್ಯ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.