ಕೋಟ: ದನದ ಕೊಟ್ಟಿಗೆಯ ಸಗಣಿ ನೀರು ಹೋಗುವ ಹೊಂಡಕ್ಕೆ ಎರಡೂವರೆ ವರ್ಷ ಮಗುವೊಂದು ಬಿದ್ದು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಮೊಳಹಳ್ಳಿಯ ಕೈಲ್ಕೇರಿ ಎಂಬಲ್ಲಿ ನಿನ್ನೆ ಸಂಜೆ ನಡೆದಿದೆ.
ಮೂಲತಃ ಬಿಹಾರ ರಾಜ್ಯದ ಕೆಸವರ್ ಪುರ್ ಆರಾ ಜಿಲ್ಲೆ ಲಾಲ್ ಬಿಹಾರಿ ಪುತ್ರ ಎರಡೂವರ ವರ್ಷದ ಅನುರಾಜ್ ಮೃತಪಟ್ಟ ಮಗು. ಲಾಲ್ ಬಿಹಾರಿ ಅವರು ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಮೊಳಹಳ್ಳಿಯ ಕೈಲ್ಕೇರಿ ಮಾವಿನಕಟ್ಟೆಯಲ್ಲಿರುವ ಚೈತ್ರ ವಿ ಅಡಪ ಅವರ ಮನೆಯಲ್ಲಿ ಹೈನುಗಾರಿಕೆ ಕೆಲಸ ಮಾಡಿಕೊಂಡಿದ್ದು, ಅಲ್ಲೇ ವಾಸವಾಗಿದ್ದಾರೆ.
ಹಟ್ಟಿಯಲ್ಲಿ ಸುಮಾರು 30 ದನಗಳಿದ್ದು, ಯಾವಾಗಲೂ ಹಟ್ಟಿಯನ್ನು ಲಾಲ್ ಬಿಹಾರಿ ಸ್ವಚ್ಛಗೊಳಿಸುತ್ತಿದ್ದರು. ಹಟ್ಟಿಯ ಆ ನೀರು ಅಲ್ಲೇ ಹಿಂದೆ ಇರುವ ಹೊಂಡದಲ್ಲಿ ತುಂಬುತ್ತಿತ್ತು. ಆದರೆ ಜ. 4ರಂದು ವಿದ್ಯುತ್ ಸರಬರಾಜು ಇಲ್ಲದ ಕಾರಣ ನೀರು ಖಾಲಿ ಮಾಡಲು ಆಗಲಿಲ್ಲ. ಸಂಜೆ 4:45 ಗಂಟೆಗೆ ಕೆಲಸ ಮುಗಿಸಿದ ಲಾಲ್, ಮನೆಗೆ ಹೋಗಿ ಮಕ್ಕಳ ಜೊತೆ ಚಹ ಕುಡಿದು ಮಕ್ಕಳು ಹಾಲು ಕುಡಿದು ಅಲ್ಲಿಯೇ ಜೆ.ಸಿ.ಬಿ ಕೆಲಸ ಮಾಡುವುದನ್ನು ನೋಡುತ್ತಿದ್ದರು.
ಸಂಜೆ 5:00 ಗಂಟೆಗೆ ಮನೆಯಿಂದ ಹೊರಗೆ ಬಂದು ನೋಡುವಾಗ ಮಗ ಅನುರಾಜ್ ನ ಚಪ್ಪಾಲ್ ಹಟ್ಟಿಯ ನೀರು ಹೋಗುವ ಹೊಂಡದ ಬಳಿ ಇದ್ದು, ಒಂದು ಕೋಲು ಬಿದ್ದಿತ್ತು. ಸಂಶಯಗೊಂಡು ಸಗಣಿ ನೀರಿನ ಹೊಂಡಕ್ಕೆ ಇಳಿದು ನೋಡಿದಾಗ ಮಗು ಮಾತನಾಡದೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿತ್ತು.
ಕೂಡಲೇ ಕೋಟೇಶ್ವರ ಎನ್ ಆರ್ ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯಾಧಿಕಾರಿಯವರು ಮಗುವನ್ನು ಪರಿಕ್ಷೀಸಿ ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮಗು ಹಟ್ಟಿಯ ನೀರಿನ ಹೊಂಡದಲ್ಲಿ ಆಕಸ್ಮಿಕವಾಗಿ ಬಿದ್ದು ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.