ಕುಂದಾಪುರ: ಆ್ಯಪ್ ಮೂಲಕ ಪಡೆದ ಸಾಲ ಮರುಪಾವತಿಸಲಾಗದೆ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಮ್ಮಾಡಿಯ ಹರೆಗೋಡುವಿನಲ್ಲಿ ಎಂಬಲ್ಲಿ ನಡೆದಿದೆ.
ಹೆಮ್ಮಾಡಿಯ ಹರೆಗೋಡು ಕೊಳಹಿತ್ಲು ನಿವಾಸಿ ಸಂಜೀವ ದೇವಾಡಿಗ ಹಾಗೂ ಕನಕ ಎಂಬವರ ಪುತ್ರ ವಿಘ್ನೇಶ್ (25) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಎಮ್ಎನ್ಸಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದನು.
ಬುಧವಾರ ರಾತ್ರಿ ಊಟ ಮಾಡಿ ಮಲಗಿದ್ದ ವಿಘ್ನೇಶ್ ಇಂದು ನಸುಕಿನ ಜಾವ ಐದು ಗಂಟೆಯ ಸುಮಾರಿಗೆ ಮನೆ ಎದುರಿನ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಘ್ನೇಷ್ ತಾಯಿ ಬೆಳಿಗ್ಗೆ ಎದ್ದು ನೋಡುವಾಗ ಮನೆಯ ಬಾಗಿಲು ತೆರೆದಿತ್ತು. ಅನುಮಾನಗೊಂಡು ಹೊರಗಡೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ವಿಘ್ನೇಶ್ ಉದ್ಯಮ ಆರಂಭಿಸಲು ಮೊಬೈಲ್ ಆ್ಯಪ್ ಮೂಲಕ ಸಾಲ ಪಡೆದಿದ್ದನು. ಆದರೆ ಲಾಕ್ ಡೌನ್ ನಿಂದ ಉದ್ಯಮದಲ್ಲಿ ನಷ್ಟ ಉಂಟಾಗಿದೆ. ಇದರಿಂದ ಪಡೆದುಕೊಂಡ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಸಾಲ ಕೊಟ್ಟವರು ಸಾಲ ಮರುಪಾವತಿಸುವಂತೆ ಕಿರುಕುಳ ನೀಡಿದ್ದಾರೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ವಿಘ್ನೆಶ್ ಸಾವಿಗೂ ಮುನ್ನ ಡೆತ್ ನೋಟ್ ಬರೆದಿದ್ದು,. ಅದರಲ್ಲಿ “ ಮೊಬೈಲ್ ಆ್ಯಪ್ ನಲ್ಲಿ ಮಾಡಿಕೊಂಡ ಸಾಲ ನನಗೆ ತೀರಿಸಲು ಆಗುತ್ತಿಲ್ಲ. ಆದ್ದರಿಂದ ನಾನು ಸೂಸೈಡ್ ಮಾಡಿಕೊಳ್ಳುತ್ತಿದ್ದೇನೆ. ಸಾಲ ಇದೆ ಕಟ್ಟಿ ಎಂದು ಯಾರಾದರೂ ಕರೆ ಮಾಡಿದರೆ ಅವನು ನಮಗೆ ಗೊತ್ತಿಲ್ಲ ಅಥವಾ ಸತ್ತು ಹೋದ ಎಂದು ಹೇಳಿ ಬಿಡಿ. ಎಲ್ಲರಿಗೂ ಮೋಸ ಮಾಡಿ ಹೋಗುತ್ತಿದ್ದೇನೆ. ಕ್ಷಮಿಸಿ ಬಿಡಿ” ಎಂಬ ಭಾವನಾತ್ಮಕ ಪತ್ರ ಬರೆದು ನೇಣಿಗೆ ಶರಣಾಗಿದ್ದಾನೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.