ಉಡುಪಿ: ಕಾರಿನ ಗ್ಲಾಸ್ ಒಡೆದು ಕ್ಯಾಮೆರಾ, ಮೊವೈಲ್ ಚಾರ್ಜರ್, ಮೆಮೊರಿ ಕಾರ್ಡ್ ಇದ್ದ ಬ್ಯಾಗ್ ಅನ್ನು ಕಳವು ಮಾಡಿರುವ ಘಟನೆ ಉಡುಪಿ ಶ್ರೀಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ನಡೆದಿದೆ.
ತಮಿಳುನಾಡಿನ ಚೆನ್ನೈ ನಿವಾಸಿ ಗೋಕುಲಕೃಷ್ಣ ಎಸ್ ಅವರು ಕುಟುಂಬ ಸಮೇತರಾಗಿ ಉಡುಪಿ ಶ್ರೀಕೃಷ್ಣನ ದರ್ಶನಕ್ಕೆ ಬಂದಿದ್ದರು. ಈ ವೇಳೆ ಕೃಷ್ಣಮಠದ ಹಿಂಬದಿಯ ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು ನಿಲ್ಲಿಸಿ, ದೇವರ ದರ್ಶನಕ್ಕೆ ತೆರಳಿದ್ದರು.
ದೇವರ ದರ್ಶನ ಪಡೆದು ಬಂದು ನೋಡುವಾಗ ಯಾರೋ ಕಳ್ಳರು ಕಾರಿನ ಡ್ರೈವರ್ ಸೈಡ್ ನ ಗ್ಲಾಸನ್ನು ಒಡೆದು ಕ್ಯಾಮೆರಾ, ಮೊಬೈಲ್ ಚಾರ್ಜರ್, ಮೆಮೊರಿ ಕಾರ್ಡ್ ಸಹಿತ ಇತರ ವಸ್ತುಗಳಿದ್ದ ಬ್ಯಾಗ್ ಅನ್ನು ಕಳ್ಳತನ ಮಾಡಿದ್ದಾರೆ. ಒಟ್ಟು 80 ಸಾವಿರ ರೂಪಾಯಿ ಮೌಲ್ಯದ ಸೊತ್ತುಗಳನ್ನು ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.