ಕಾಪು: ಯಾವುದೇ ಮೂಲಭೂತ ಸೌಕರ್ಯಗಳ ಪೂರ್ವಸಿದ್ಧತೆ ಇಲ್ಲದೇ ಕೇವಲ ರಾಜಕೀಯ ಲಾಭದ ಲೆಕ್ಕಾಚಾರದಿಂದ ಕಾಪು ಪುರಸಭೆಯನ್ನು ಸೃಷ್ಠಿಸಿ 100 ಕೋಟಿ ರೂಪಾಯಿ ಅನುದಾನ ತರುತ್ತೇನೆಂದು ಎಲ್ಲೆಡೆ ಪುಕ್ಕಟೆ ಪ್ರಚಾರಗಿಟ್ಟಿಸಿಕೊಂಡು, ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಕೈಗೊಳ್ಳದ ಮಾಜಿ ಸಚಿವ ಹಾಗೂ ಕಾಪು ಮಾಜಿ ಶಾಸಕ ವಿನಯ ಕುಮಾರ್ ಸೊರಕೆಯವರು ಕಾಪು ಪುರಸಭಾ ವ್ಯಾಪ್ತಿಯ ಮೂಲಭೂತ ಸೌಕರ್ಯಗಳ ಅವ್ಯವಸ್ಥೆಗೆ ಮೂಲ ಕಾರಣರಾಗಿದ್ದಾರೆ ಎಂದು ಜಿಲ್ಲಾ ಬಿಜೆಪಿ ದೂರಿದೆ.
ಇಂದು ಗ್ರಾಮ ಪಂಚಾಯತ್, ಪುರಸಭೆ, ಪಟ್ಟಣ ಪಂಚಾಯತ್, ನಗರಸಭೆ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸಹಿತ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಜನಪರ ಮತ್ತು ಅಭಿವೃದ್ಧಿಪರ ಆಡಳಿತವಿರುವ ಕಾಲಘಟ್ಟದಲ್ಲಿ ಕಾಪು ಪುರಸಭೆ ವ್ಯಾಪ್ತಿಯ ಸರ್ವತೋಮುಖ ಅಭಿವೃದ್ಧಿ ಬಿಜೆಪಿ ಆಡಳಿತದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಕಾಪು ಪುರಸಭಾ ಚುನಾವಣಾ ಪ್ರಚಾರ ಕಾರ್ಯದಲ್ಲಿ ಸಚಿವರು, ಸಂಸದರು, ಶಾಸಕರು, ಪಕ್ಷದ ರಾಷ್ಟ್ರೀಯ, ಅಂತರ್ ರಾಜ್ಯ, ರಾಜ್ಯ, ಜಿಲ್ಲಾ ಮುಖಂಡರ ಸಹಿತ ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳು ಸಮರೋಪಾದಿಯಲ್ಲಿ ತೊಡಗಿಸಿಕೊಂಡಿದ್ದು, ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ಯಾವುದೇ ಅಪಪ್ರಚಾರಗಳ ಗಿಮಿಕ್ ಪ್ರಯೋಜನಕ್ಕೆ ಬಾರದು.
ಅಭಿವೃದ್ಧಿಯ ಮೂಲ ಮಂತ್ರದೊಂದಿಗೆ ನಿರ್ದಿಷ್ಟ ಯೋಜನೆಗಳ ಅನುಷ್ಠಾನದ ಜೊತೆಗೆ ನವ ಕಾಪು ನಿರ್ಮಾಣದ ದೃಢ ಸಂಕಲ್ಪ ಹೊಂದಿರುವ ಬಿಜೆಪಿ ಈ ಚುನಾವಣೆಯಲ್ಲಿ ಪ್ರಬುದ್ಧ ಮತದಾರರ ಆಶೀರ್ವಾದದಿಂದ ಕಾಪು ಪುರಸಭೆಯ ಆಡಳಿತವನ್ನು ಬಹುಮತದಿಂದ ತನ್ನ ತೆಕ್ಕೆಗೆ ವಹಿಸಿಕೊಳ್ಳುವುದು ನಿಶ್ಚಿತ ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.