ಮಣಿಪಾಲ: ನಕಲಿ ದಾಖಲೆ ಸೃಷ್ಟಿಸಿ ಬಾರ್ ಮಾಲೀಕರಿಗೆ ವಂಚಿಸಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ.
ಹೆರ್ಗಾ ಗ್ರಾಮದ ಈಶ್ವರನಗರದ ನಿವಾಸಿ ಎಸ್. ಸುಧಾ ಆರ್. ನಾಯಕ್ ಅವರು ವಂಚನೆಗೆ ಒಳಗಾಗಿದ್ದಾರೆ. ಇವರ ಜಂಟಿ ಖಾತೆಯಲ್ಲಿರುವ ಮಣಿಪಾಲ ಆದರ್ಶನಗರದ ಲೇಕ್ ವ್ಯೂ ಬಾರ್ ಆ್ಯಂಡ್ ರೆಸ್ಟೋರೆಂಟ್ ಹಾಗೂ ಲಾಡ್ಜಿಂಗ್ನಲ್ಲಿ 2018ರಿಂದ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಂದಾಪುರದ ಗಂಗೊಳ್ಳಿ ಬೀಚ್ ರಸ್ತೆಯ ನಿವಾಸಿ ಮೈಕಲ್ ಡಿಸೋಜಾ ವಂಚನೆ ಎಸಗಿರುವ ಆರೋಪಿ.
ಈತ ಪಿರ್ಯಾದಿದಾರರ ಹೆಸರಿನಲ್ಲಿರುವ ಡೋರ್ ನಂ: 4/26F ಅನ್ನು ಅವರಿಗೆ ತಿಳಿಯದೆ, ಅವರ ಹಾಗೂ ಅವರ ಸೊಸೆ ಪ್ರಿಯ ನಾಯಕ್ ಅವರ ನಕಲಿ ಸಹಿ ಹಾಕಿ 2019ರ ಡಿಸೆಂಬರ್ 11ರಂದು ತನ್ನ ಹೆಸರಿಗೆ ಬಾಡಿಗೆ ಕರಾರು ಪತ್ರವನ್ನು ತಯಾರಿಸಿಕೊಂಡಿದ್ದನು. ಈ ನಕಲಿ ಬಾಡಿಗೆ ಕರಾರು ಪತ್ರದ ಆಧಾರದಲ್ಲಿ ಮಣಿಪಾಲ ರಿಕ್ರಿಯೇಶನ್ ಕ್ಲಬ್ನ್ನು ಆರಂಭಿಸಿದ್ದನು.
ಇದಕ್ಕೆ ತಾನು ಅಧ್ಯಕ್ಷನೆಂದು ನಮೂದಿಸಿ ಇತರ 10 ಜನರನ್ನು ಸದಸ್ಯರನ್ನಾಗಿ ನಮೂದಿಸಿ, ಸದಸ್ಯರ ನಕಲಿ ಸಹಿಯನ್ನು ಹಾಕಿ ನಕಲಿ ದಾಖಲಾತಿಯನ್ನು ಸೃಷ್ಟಿಸಿ 2019ರ ಡಿಸೆಂಬರ್ 13ರಂದು ನೋಂದಣಿ ಮಾಡಿ ಮೋಸ ಮಾಡಿದ್ದಾನೆ ಎಂದು ಸುಧಾ ಅವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.