ಡಾಂಬರಿನ ಮುಖ ನೋಡಿ ವರ್ಷಗಳೇ ಉರುಳಿದೆ; ಜನರ ಪ್ರಾಣ ತೆಗೆಯಲು ರೆಡಿಯಾಗಿ ನಿಂತಿದೆ ಹೆಬ್ರಿಯ ಈ ರಸ್ತೆ!!

ಹೆಬ್ರಿ: ಡಾಂಬರು ನೋಡಿ ವರ್ಷಗಳೇ ಉರುಳಿರುವ ರಸ್ತೆ. ಹೊಂಡ ಗುಂಡಿ ಬಿದ್ದಿರುವ ರಸ್ತೆಯಲ್ಲೇ ನಿತ್ಯ ಜನರ ಓಡಾಟ. ಇದು ಹೆಬ್ರಿಯ ವಿಶ್ವಕರ್ಮ ಸಭಾಭವನಕ್ಕೆ ಹೋಗುವ ರಸ್ತೆಯ ಇಂದಿನ ದುಸ್ಥಿತಿ.

ಮಳೆ ಬಂದರಂತೂ ಈ ರಸ್ತೆಯಲ್ಲಿ ಹೋಗುವುದೇ ಒಂದು ದುಸ್ಸಾಹಸ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ, ರಸ್ತೆಯಲ್ಲೇ ಹರಿಯುತ್ತೇ ನೀರು. ಮಳೆಗಾಲದಲ್ಲಿ ಅಂತೂ ಈ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡೇ ಹೋಗಬೇಕು. ಈ ರಸ್ತೆ ಡಾಂಬರಿನ ಮುಖ ನೋಡಿ ಸಾಕಷ್ಟು ವರ್ಷಗಳೇ ಕಳೆದಿದೆ. ಈ ಭಾಗದ ಜನರ ಸಂಕಷ್ಟವನ್ನು ಯಾರೂ ಕೇಳುವವರಿಲ್ಲ.

ಈ ರಸ್ತೆಯಲ್ಲಿ ವಿಶ್ವಕರ್ಮ ಸಭಾಭವನ, ಕ್ರಿಶ್ಚನ್ ಚರ್ಚ್ ಹಾಗೂ ಮೂವತ್ತಕ್ಕೂ ಹೆಚ್ಚಿನ ಮನೆಗಳಿವೆ. ವಾಹನ ಸವಾರರು ಸಂಚರಿಸಲು ಹರಸಾಹಸವೇ ಪಡಬೇಕು. ಆ ರೀತಿ‌ ಇದೇ ರಸ್ತೆಯ ಇಂದಿನ ಸ್ಥಿತಿ. ಹಿರಿಯ ನಾಗರಿಕರು, ಶಾಲಾ ಮಕ್ಕಳ ಅಳಲು ಕೇಳುವವರಿಲ್ಲ. ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿ ಗ್ರಾಮ ಪಂಚಾಯತ್ ಗೆ ಹಲವಾರು ಬಾರಿ ಮನವಿ‌ ನೀಡಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆಯ ಸ್ಥಿತಿ ಹಾಗೆಯೇ ಇದೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.

ಗುಳಿಬೆಟ್ಟು, ಅಡಾಲಬೆಟ್ಟು, ಎಲಾಳಿ ಊರುಗಳಿಗೆ ಸಾಗಬೇಕಾದರೆ, ಈ ರಸ್ತೆಯನ್ನೇ ಅವಲಂಬಿಸಬೇಕು. ಮಳೆಗಾಲದಲ್ಲಿ ಅಂತೂ ಈ ರಸ್ತೆಯ ಸ್ಥಿತಿ ತೀರಾ ಶೋಚನೀಯ. ಚುನಾವಣೆ ವೇಳೆ ಮಾತ್ರ ಮುಖ ತೋರಿಸುವ ಜನಪ್ರತಿನಿಧಿಗಳು, ಮತ್ತೆ ಇತ್ತಾ ಸುಳಿಯುವುದಿಲ್ಲ. ಜನರ ಸಂಕಷ್ಟ ಆಲಿಸುವುದಿಲ್ಲ. ಅವರಿಗೆ ಬೇಕಿರುವುದು ನಮ್ಮ ಮತ ಮಾತ್ರ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಶೀಘ್ರವೇ ಗ್ರಾಪಂ ಈ ರಸ್ತೆಯನ್ನು ದುರಸ್ತಿ‌ ಮಾಡುವ ಕೆಲಸಕ್ಕೆ ಕೈ ಹಾಕಬೇಕು. ಇಲ್ಲದಿದ್ದರೆ ಗ್ರಾಪಂ ವಿರುದ್ಧ ದೊಡ್ಡಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.