ಉಡುಪಿ: ಕಳೆದ ಎಂಟು ವರ್ಷಗಳ ಹಿಂದೆ ಹಿರಿಯಡಕ ಸಮೀಪದ ಅಂಜಾರು ಜೈಲಿನಲ್ಲಿ ನಡೆದ ರೌಡಿ ಶೀಟರ್ ವಿನೋದ ಶೆಟ್ಟಿಗಾರ್ ಕೊಲೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಇಂದು ಮಹತ್ವದ ತೀರ್ಪು ನೀಡಿದೆ.
ಬ್ರಹ್ಮಾವರ ಬೈಕಾಡಿ ನಿವಾಸಿಗಳಾದ ಮುತ್ತಪ್ಪ (36), ನಾಗರಾಜ ಬಳೆಗಾರ (33), ಶೇಖ್ ರಿಯಾಜ್ ಅಹಮ್ಮದ್ (33) ಹಾಗೂ ಗಂಗಾವತಿ ಅಗೋಳಿ ನಿವಾಸಿ ಶರಣಪ್ಪ ಅಮರಾಪುರ(33) ಎಂಬುವವರನ್ನು ಶಿಕ್ಷೆಗೆ ಗುರಿಯಾದ ಆರೋಪಿಗಳೆಂದು ಗುರುತಿಸಲಾಗಿದೆ. ಕೊಲೆ ಪ್ರಕರಣದ ಸೂತ್ರಧಾರಿ ಕುಖ್ಯಾತ ರೌಡಿ ಕುಕ್ಕಿಕಟ್ಟೆ ಇಂದಿರಾನಗರದ ನಿವಾಸಿ ಪಿಟ್ಟಿ ನಾಗೇಶ ಈಗಾಗಲೇ ಹತ್ಯೆಯಾಗಿದ್ದಾನೆ.
ಒಟ್ಟು 48 ಸಾಕ್ಷಿದಾರರ ಪೈಕಿ 35 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶ ಚಂದ್ರಶೇಖರ ಎಂ.ಜೋಷಿ ಅವರು ಬುಧವಾರ ನಾಲ್ವರು ದೋಷಿಗಳೆಂದು ತೀರ್ಪು ನೀಡಿದ್ದು, ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಜಿಲ್ಲಾ ಸರ್ಕಾರಿ ಅಭಿಯೋಜಕಿ ಶಾಂತಿಬಾಯಿ ವಾದ ಮಂಡಿಸಿದ್ದರು.