ಪೈಪ್ ಕತ್ತರಿಸಿ ಕಂತೆ ಕಂತೆ ನೋಟು ಹೊರತೆಗೆದ ಎಸಿಬಿ ಅಧಿಕಾರಿಗಳು..!!

ಕಲಬುರಗಿ: ಇಲ್ಲಿನ ಗುಬ್ಬಿ ‌ಕಾಲೊನಿಯಲ್ಲಿರುವ ಲೋಕೋಪಯೋಗಿ ಇಲಾಖೆ ಜೇವರ್ಗಿ ಉಪ ವಿಭಾಗದ ಕಿರಿಯ ಎಂಜಿನಿಯರ್ ಶಾಂತಗೌಡ ಬಿರಾದಾರ ಅವರ ಮನೆಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಪೈಪ್ ನಲ್ಲಿ ಇರಿಸಿದ್ದ ಕಂತೆ ಕಂತೆ ನೋಟುಗಳನ್ನು ಹೊರತೆಗೆದಿದ್ದಾರೆ. ಮನೆಯ ಪೈಪ್ ನಲ್ಲಿ ಅಡಗಿಸಿಟ್ಟಿದ್ದ ₹ 5 ಲಕ್ಷಕ್ಕೂ ಅಧಿಕ ಹಣದ ಕಟ್ಟುಗಳನ್ನು ಅಧಿಕಾರಿಗಳು ಹೊರ ತೆಗೆದಿದ್ದಾರೆ ಎಂದು ತಿಳಿದುಬಂದಿದೆ.

ಶಾಂತಗೌಡ ಅವರಿಗೆ ಸೇರಿದ ಗುಬ್ಬಿ ಕಾಲೊನಿ ಮನೆ, ಯಡ್ರಾಮಿ ತಾಲ್ಲೂಕಿನ ಹಂಗರಗಾ (ಬಿ) ಗ್ರಾಮದಲ್ಲಿನ ತೋಟದ ಮನೆ ಹಾಗೂ ಜೇವರ್ಗಿ ಲೋಕೋಪಯೋಗಿ ‌ಕಚೇರಿ ಮೇಲೆ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ಅಧಿಕಾರಿಗಳ ತಂಡ ಎಸಿಬಿ ಈಶಾನ್ಯ ವಲಯದ ಎಸ್ಪಿ ಮಹೇಶ ಮೇಘಣ್ಣವರ ನೇತೃತ್ವದಲ್ಲಿ ದಾಳಿ ನಡೆಸಿದೆ.

ಗುಬ್ಬಿ ಕಾಲೊನಿ ಮನೆಯ ತಿಜೋರಿ, ಬೆಡ್ ರೂಮ್ ಜಾಲಾಡಿದ ತಂಡಕ್ಕೆ ಪ್ಲಂಬಿಂಗ್ ಪೈಪ್‌ನಲ್ಲಿ ಹಣ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಪ್ಲಂಬರ್ ಕರೆದು ಪೈಪ್ ಕೊರೆಸಿದಾಗ ₹ 500 ಮುಖಬೆಲೆಯ ನೋಟುಗಳು ಸಿಕ್ಕಿವೆ. ಇಲ್ಲಿಯವರೆಗೆ ₹ 40 ಲಕ್ಷ ನಗದು ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.