ಉಡುಪಿ: ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶುಕ್ರವಾರ ಉಡುಪಿಯ ಕೊರಗರ ಕಾಲೊನಿಯಲ್ಲಿ ಗೋಪೂಜೆ ಮಾಡಿದರು.
ಉಡುಪಿ ದೊಡ್ಡಣಗುಡ್ಡೆಯ ಅಂಬೇಡ್ಕರ್ ಕಾಲೊನಿಯಲ್ಲಿ ದಲಿತ ವಿಧವೆ ಕಮಲಮ್ಮ ಕೇವಲ ಮೂರು ಸೆಂಟ್ಸ್ ಜಾಗದಲ್ಲಿ 50ಕ್ಕೂ ಹೆಚ್ಚು ಶುದ್ಧ ದೇಶಿ ಹಸುಗಳನ್ನು ಪೋಷಿಸುತ್ತಿದ್ದಾರೆ. ಯಾವುದೇ ಲಾಭದ ಉದ್ದೇಶವಿಲ್ಲದೇ ನಡೆಸುತ್ತಿರುವ ಈ ಗೋಶಾಲೆಗೆ ದೀಪಾವಳಿ ಪ್ರಯುಕ್ತ ಆಗಮಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗೋಪೂಜೆ ನೆರವೇರಿಸಿದರು.
ಗೋವಿನ ಪಾದಕ್ಕೆ ನೀರೆರೆದು, ಹಣೆಗೆ ತಿಲಕವಿಟ್ಟು, ಮೈಮೇಲೆ ಸೀರೆ ರವಿಕೆ ಕಣ ಪುಷ್ಪ ಮಾಲೆ ಹಾಕಿ, ಅವಲಕ್ಕಿ, ಅರಳು ಮಿಶ್ರಿತ ಕಜ್ಜಾಯವನ್ನು ಅರ್ಪಿಸಿ ಆರತಿ ಬೆಳಗಿದರು. ಪುರೋಹಿತ ಪದ್ಮನಾಭ ಆಚಾರ್ಯ ಪೂಜಾವಿಧಿ ನಡೆಸಿದರು. ಇದೇ ವೇಳೆ ಸಾಮೂಹಿಕ ಪ್ರಾರ್ಥನೆ ನಡೆಯಿತು.
ಬಳಿಕ ಇಲಾಖೆಯ ವತಿಯಿಂದ ಕಮಲಮ್ಮ ಮತ್ತು ಅವರ ಮಗನಿಗೆ ಸಚಿವರು ಹೊಸ ಬಟ್ಟೆ ಮತ್ತು ಸಿಹಿತಿಂಡಿ ಹಾಗೂ ಹಸುಗಳಿಗೆ ಒಂದು ಕ್ವಿಂಟಾಲ್ ಹಿಂಡಿಯನ್ನು ಉಡುಗೊರೆಯಾಗಿ ನೀಡಿದರು. ಕೇವಲ ಮೂರು ಸೆಂಟ್ಸ್ ಜಾಗದಲ್ಲಿ ಇಷ್ಟೊಂದು ಹಸುಗಳನ್ನು ಅದೂ ಯಾವುದೇ ಲಾಭವಿಲ್ಲದೇ ಸಾಕುತ್ತಿರುವ ಕಮಲಮ್ಮನ ಸಾಹಸಕ್ಕೆ ಸಚಿವ ಕೋಟ ಅವರು ಆನಂದ ಹಾಗೂ ಅಚ್ಚರಿ ವ್ಯಕ್ತಪಡಿಸಿದರು.
ಈ ವೇಳೆ ಉಡುಪಿ ಶಾಸಕ ಕೆ. ರಘುಪತಿ ಭಟ್, ಕಮಲಮ್ಮನ ಗೋಶಾಲೆಯ ಸುರಕ್ಷತೆಗೆ ಅವಶ್ಯವಿರುವ ಸೌಲಭ್ಯಗಳನ್ನು ಒದಗಿಸುವಂತೆ ಮನವಿ ಮಾಡಿದರು. ಮನವಿಯನ್ನು ಒಪ್ಪಿದ ಸಚಿವರು ಈಡೇರಿಸುವ ಭರವಸೆ ನೀಡಿದರು.
ಉಡುಪಿ ಜಿ.ಪಂ. ಮಾಜಿ ಅಧ್ಯಕ್ಷ ದಿನಕರ ಬಾಬು, ನಗರ ಸಭಾ ಸದಸ್ಯರಾದ ಗಿರಿಧರ ಆಚಾರ್ಯ, ಪ್ರಭಾಕರ ಪೂಜಾರಿ, ನಿವೃತ್ತ ಪ್ರಾಂಶುಪಾಲ ಪ್ರೊ. ಸದಾಶಿವ ರಾವ್, ಎಸ್.ವಿ .ಭಟ್ ಮೊದಲಾದವರಿದ್ದರು.
ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಹಾಗೂ ಬಿಜೆಪಿ ಪ್ರಮುಖರಾದ ಸುರೇಶ್ ಪೂಜಾರಿ ಪೇತ್ರಿ ಕಾರ್ಯಕ್ರಮ ಸಂಯೋಜಿದರು. ಕಾಲೊನಿಯ ನಿವಾಸಿಗಳಿಗೆ ಸಚಿವರ ಸೂಚನೆಯಂತೆ ಸಿಹಿ ವಿತರಿಸಲಾಯಿತು.