ಕುಂದಾಪುರ: ಮೀನು ಸಾಗಾಟದ ಇನ್ಸುಲೇಟರ್ ವಾಹನವೊಂದರಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿರುವಾಗ ಪೊಲೀಸರು ವಾಹನ ಸಮೇತ ಏಳು ಮಂದಿಯನ್ನು ಬಂಧಿಸಿದ ಘಟನೆ ಸೋಮವಾರ ಬೆಳಿಗ್ಗೆ ಕುಂದಾಪುರದ ಬೀಜಾಡಿ ಎಂಬಲ್ಲಿ ನಡೆದಿದೆ.
ಇನ್ಸುಲೇಟರ್ ವಾಹನ ಚಾಲಕ ಕಾಸರಗೋಡು ಪಾವೂರು ಮಂಜೇಶ್ವರದ ಅಬ್ದುಲ್ ಸತ್ತಾರ್ (೨೩), ಬ್ರಹ್ಮಾವರ ವಾರಂಬಳ್ಳಿ ನಿವಾಸಿಗಳಾದ ಮಂಜುನಾಥ್ (೧೯), ಶ್ರೀಕಾಂತ್ (೨೮), ಶರಣಪ್ಪ (೧೯), ಮಂಗಳೂರು ಬಿಜೈ ನಿವಾಸಿ ರಾಜೇಶ್ ಶೆಟ್ಟಿ (೪೦), ಸುರತ್ಕಲ್ ಕುಳಾಯಿ ನಿವಾಸಿ ಸುಕೇಶ್ ಕೋಟ್ಯಾನ್ (೩೪), ಕಾಸರಗೋಡು ಪಾವೂರಿನ ನೌಶಾದ್ ಅಲಿ (೨೧) ಬಂಧಿತ ಆರೋಪಿಗಳು.
ಕುಂದಾಪುರ ಪಿಎಸ್ಐ ಹರೀಶ್ ಆರ್ ಹಾಗೂ ಸಿಬ್ಬಂದಿಗಳು ಬೀಜಾಡಿ ಹೆದ್ದಾರಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಇನ್ನೋವಾ ಕಾರು ಹಾಗೂ ಇನ್ಸುಲೇಟರ್ ವಾಹನವನ್ನು ನಿಲ್ಲಿಸಲು ಸೂಚಿಸಿದ್ದರು. ಪೊಲೀಸರನ್ನು ಕಂಡು ಬೆದರಿದ ಆರೋಪಿಗಳು ಸ್ವಲ್ಪ ದೂರ ಕ್ರಮಿಸಿ ವಾಹನ ನಿಲ್ಲಿಸಿ ಪರಾರಿಯಾಗಲು ಯತ್ನಿಸಿದ್ದರು. ಅನುಮಾನಗೊಂಡು ಕೂಡಲೇ ಅವರನ್ನು ಸುತ್ತುವರಿದ ಪೊಲೀಸರು ಕೂಲಂಕುಷವಾಗಿ ವಿಚಾರಿಸಿದಾಗ ಅಕ್ರಮವಾಗಿ ಮರಳು ಸಾಗಿಸುತ್ತಿರುವ ವಿಚಾರ ಪೊಲೀಸರ ಗಮನಕ್ಕೆ ಬಂದಿದೆ.
ಅಕ್ರಮ ಮರಳು ಸಾಗಾಟಕ್ಕೆ ಇನ್ನೋವಾ ಎಸ್ಕಾರ್ಟ್!
ಬೆಂಗಾವಲು ವಾಹನ (ಎಸ್ಕಾರ್ಟ್) ಇಟ್ಟುಕೊಂಡು ಇನ್ಸುಲೆಟರ್ ವಾಹನದಲ್ಲಿ ಮರಳು ತುಂಬಿಸಿ ಮಂಗಳೂರಿನ ಬಿ.ಸಿ. ರೋಡಿನಿಂದ ಬೀಜಾಡಿಗೆ ಸಾಗಿಸುತ್ತಿದ್ದ ಬಗ್ಗೆ ಪೊಲೀಸ್ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ. ಮಂಗಳೂರಿನಿಂದ ದುಪ್ಪಟ್ಟು ಹಣಕ್ಕೆ ಈ ಮರಳನ್ನು ಸಾಗಿಸಲಾಗುತ್ತಿದ್ದು ಹಲವು ತಿಂಗಳುಗಳಿಂದ ಈ ಜಾಲ ಸಕ್ರೀಯವಾಗಿ ಕಾರ್ಯಚರಿಸುತ್ತಿದೆ ಎನ್ನಲಾಗಿದೆ. ಪೊಲೀಸರು ಮರಳು ತುಂಬಿದ ಇನ್ಸುಲೇಟರ್ ವಾಹನ, ಎಸ್ಕಾರ್ಟ್ ಮಾಡುತ್ತಿದ್ದ ಇನ್ನೋವಾ ಕಾರು ಸಮೇತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಕುಂದಾಪುರ ಪಿಎಸ್ಐ ಹರೀಶ್ ಆರ್, ಎಎಸ್ಐ ಸುಧಾಕರ್, ಹೆಡ್ ಕಾನ್ಸ್ಟೇಬಲ್ಗಳಾದ ವಿಜಯ, ಹರೀಶ್, ಸಿಬ್ಬಂದಿಗಳಾದ ಆನಂದ ಗಾಣಿಗ, ಪ್ರವೀಣ್, ಮಂಜುನಾಥ್, ಇಲಾಖಾ ಜೀಪು ಚಾಲಕ ಲೋಕೇಶ ಮೊದಲಾದವರಿದ್ದರು.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.