ಕುಂದಾಪುರ: ಕೆದೂರಿನ ಸ್ಪೂರ್ತಿಧಾಮ ಸಂಸ್ಥೆಯನ್ನು ಮುಚ್ಚುವ ಬಗ್ಗೆ ಸಂಬಂಧಪಟ್ಟವರಲ್ಲಿ ಚರ್ಚಿಸಿದ್ದೇನೆ. ಡಿಐಜಿ ಹಾಗೂ ಜಿಲ್ಲಾಧಿಕಾರಿಯವರ ಜೊತೆ ಈ ಬಗ್ಗೆ ಮಾತನಾಡಿದ್ದು, ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಬಗ್ಗೆ ಸೂಕ್ತ ಕ್ರಮ ಕೈಗೊಂಡಿದ್ದಾರೆ. ಖಂಡಿತವಾಗಿಯೂ ಸ್ಪೂರ್ತಿ ಸಂಸ್ಥೆ ಮುಚ್ಚುವ ಕೆಲಸದಲ್ಲಿ ಪೊಲೀಸ್ ಇಲಾಖೆ ಕೆಲಸ ನಿರ್ವಹಿಸುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಉಡುಪಿಯ ಶ್ಯಾಮಲಾ ಕುಂದರ್ ಹೇಳಿದರು.
ಇತ್ತೀಚೆಗಷ್ಟೇ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಕುಂದಾಪುರದ ವೆಂಕಟರಮಣ ದೇವಳಕ್ಕೆ ಆಗಮಿಸಿದ ಅವರು, ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ವಿಶೇಷವಾಗಿ ಉಡುಪಿ ಜಿಲ್ಲೆಯವಳಾದ್ದರಿಂದ ಈ ಭಾಗಕ್ಕೆ ಹೆಚ್ಚಿನ ಒತ್ತನ್ನು ಕೊಡುತ್ತೇನೆ. ಜೊತೆಗೆ ದಕ್ಷಿಣ ಭಾರತದ ಜವಾಬ್ದಾರಿಯೂ ನನ್ನ ಮೇಲಿದೆ. ಏನೇ ಸಮಸ್ಯೆಗಳಿದ್ದರೂ ಯಾರೂ ಕೂಡ ನನ್ನನ್ನು ನೇರವಾಗಿ ಸಂಪರ್ಕಿಸಬಹುದು. ಮಹಿಳಾ ಆಯೋಗಕ್ಕೆ ಸಂಪರ್ಕ ಮಾಡಿದಾಗ ಕೆಲ ಸಮಸ್ಯೆಗಳನ್ನು ಅಲ್ಲಿಯೇ ಪರಿಹರಿಸುವ ಮಾರ್ಗೋಪಾಯಗಳನ್ನು ಕೈಗೊಳ್ಳುತ್ತೇವೆ ಎಂದರು.
ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಮಾರ್ಚ್ 7 ರಂದು ಅಧಿಕಾರ ವಹಿಸಿಕೊಂಡಿದ್ದೇನೆ. ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಭಾರಿಗೆ ಜಿಲ್ಲೆಯನ್ನು ಭೇಟಿ ಮಾಡುತ್ತಿದ್ದೇನೆ. ಶುಕ್ರವಾರ ಬೆಂಗಳೂರಿನಲ್ಲಿ ಮಹಿಳಾ ಆಯೋಗದ ಸಭೆ ನಡೆಸಿ ಅನೇಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದೇನೆ ಎಂದರು.
ಈ ವೇಳೆಯಲ್ಲಿ ವೆಂಕಟರಮಣ ದೇವಳದ ಮುಖ್ಯಸ್ಥ ಮೋಹನ್ದಾಸ್ ಶೆಣೈ, ಗುಣರತ್ನಾ, ಶ್ರೀಲತಾ ಸುರೇಶ್, ಜಯಶ್ರೀ ಮೊಗವೀರ, ಕಾಡೂರು ಸುರೇಶ್ ಶೆಟ್ಟಿ, ಶಂಕರ್ ಅಂಕದಕಟ್ಟೆ, ಭಾಸ್ಕರ ಬಿಲ್ಲವ ಮೊದಲಾದವರು ಉಪಸ್ಥಿತರಿದ್ದರು.