ಉಡುಪಿ: ಇಡೀ ಕರುನಾಡಿನ ಜನತೆಯ ಕಣ್ಮಣಿಯಾಗಿ, ಕರಾವಳಿಯ ಘಟನೆಗಳ ಆಗುಹೋಗುಗಳ ಕೈಗನ್ನಡಿಯಾಗಿ, ಕುಸುಮದ ಪರಿಮಳದಂತೆ ಪರಿಪರಿಯಾಗಿ ಪಸರಿಸುವ ಸುದ್ದಿಯ ಸುಜಲೆಯನ್ನು ಹೊತ್ತು 24×7 ಎಂಬಂತೆ ವರುಷದುದ್ದಕ್ಕೂ ನಿಂತ ನೀರಾಗದೆ ಹರಿವ ಜಲಧಿಯಂತೆ ಕಲರವ ಹಬ್ಬಿಸುತ್ತ ಸಾಗುತ್ತಿರುವ ಡಿಜಿಟಲ್ ಮಾಧ್ಯಮವೊಂದರ ಸಾರಥ್ಯವನ್ನು ವಹಿಸಿಕೊಂಡು ಮುನ್ನಡೆಸುತ್ತಿರುವ ಉಡುಪಿಯ ಖ್ಯಾತ ಯುವ ಪತ್ರಕರ್ತ ಹಾಗೂ ಛಾಯಾಗ್ರಾಹಕ ಜನಾರ್ದನ್ ಕೊಡವೂರು. ಆ ಸುದ್ದಿಯ ಸೂರು ದೇಶ ವಿದೇಶಿಗರ ಗಮನ ಸೆಳೆಯುತ್ತಿರುವ ಡಿಜಿಟಲ್ ಮಾಧ್ಯಮ ಕರಾವಳಿ X ಪ್ರೆಸ್ .
ಊರಿನ ಪ್ರಚಲಿತ ಪತ್ರಿಕೆಗಳ ಹೆಸರುಗಳು ಜನರಿಗೆ ಎಷ್ಟು ಪರಿಚಿತವೋ ಅಷ್ಟೇ ಈ ವ್ಯಕ್ತಿ ಕೂಡ ಚಿರಪರಿಚಿತ. ಮದುವೆ ಮಂಟಪದಲ್ಲಿ ಮದು ಮಕ್ಕಳಿಗಿಂತ ಮೊದಲು, ಸಭಾಕಾರ್ಯಕ್ರಮಗಳಲ್ಲಿ ಅತಿಥಿಗಳಿಗಿಂತ ಮೊದಲು ಹಾಜರಿದ್ದು ಕ್ಲಿಕ್ಕೆಂದು ಬೆಳಕು ಹರಡುತ್ತಾ ಜನರ ಕಣ್ಣಿಗೆ ಮೊದಲು ಬೀಳುವ ಜನಸಾಮಾನ್ಯರಿಂದ ಹಿಡಿದು ಪ್ರತಿಷ್ಠಿತ ರಾಜಕೀಯ, ಸಾಧು ಸಂತ, ಸಿನಿಮಾ ತಾರೆಯರೇ ಇರಲಿ ತಮ್ಮ ಹಾಸ್ಯಭರಿತ ಮಾತುಗಳಿಂದ ಎಲ್ಲರ ಪರಿಚಯವನ್ನು ಸಂಪಾದಿಸಿರುವ, ಹೆಸರೇ ಸೂಚಿಸುವಂತೆ ಜನಜನಿತ ವ್ಯಕ್ತಿ ಜನಾರ್ದನ ಕೊಡವೂರು. ಎಲ್ಲರನ್ನು ಆತ್ಮೀಯತೆಯಿಂದ ಮಾತನಾಡಿಸುತ್ತ ಮಾತಿನಲ್ಲೆ ಮೋಡಿ ಮಾಡುತ್ತ ದಿನದ ಹೆಚ್ಚಿನ ಸಮಯ ಕ್ಯಾಮರಾ ಒಂದನ್ನು ಹೆಗಲಿಗೇರಿಸಿಕೊಂಡು ಸುದ್ದಿಗಳ ಬೇಟೆಯಾಡುವ ಖ್ಯಾತ ವರದಿಗಾರ.
ಆದರೆ ಸಾರ್ವಜನಿಕ ಸಂಘ ಸಂಸ್ಥೆಗಳಲ್ಲಿ ಯಾವುದೇ ದೊಡ್ಡ ಹುದ್ದೆಗಳನ್ನು ಬಯಸದೆ ಹಿಂದೆ ನಿಂತು ಶ್ರಮಿಸುವ ಶ್ರಮಜೀವಿ ಸಮಾಜ ಸೇವಕ.
ದಿ. ಲಕ್ಷ್ಮೀನಾರಾಯಣ ಹಾಗು ಸತ್ಯಭಾಮಾ ದಂಪತಿಗಳ ಮುದ್ದಿನ ಮಧ್ಯಮ ಕುವರ ಜನಾರ್ದನ್. ಕುಂಜೂರು ಇವರ ಹುಟ್ಟೂರು, ಆದರೆ ನೆಲೆ ನಿಂತ ಊರು ಕೊಡವೂರು. ಇವರು ವಿಜಯವಾಣಿ ಪತ್ರಿಕೆಯ ಪ್ರಮುಖ ವರದಿಗಾರರಾಗಿಯೂ ಹಲವು ವರ್ಷದಿಂದ ವೃತ್ತಿಯಲ್ಲಿದ್ದಾರೆ.
ಮಾಧ್ಯಮ ಕ್ಷೇತ್ರದಲ್ಲಿ ದುಡಿದ ಸುಮಾರು 18 ವರ್ಷಗಳ ಅವಿರತ ಶ್ರಮ ಹಾಗೂ ಛಾಯಾಚಿತ್ರ ಕ್ಷೇತ್ರದಲ್ಲಿ ಸಂಪೂರ್ಣ ತೊಡಗಿಸಿಕೊಂಡ ಫಲವಾಗಿ ಹಲವಾರು ಪ್ರಶಸ್ತಿ ಸನ್ಮಾನಗಳು ಅವರನ್ನು ಹುಡುಕಿಕೊಂಡು ಬಂದಿವೆ.
2013ರಲ್ಲಿ ದೊರೆತ ಜಿಲ್ಲಾ ಕನ್ನಡ ರಾಜೋತ್ಸವ ಪ್ರಶಸ್ತಿ, ಉಪಾಧ್ಯಾಯ ಸಮ್ಮಾನ್ ಎಂಬ ರಾಜ್ಯ ಮಟ್ಟದ ಪ್ರಶಸ್ತಿಯಂತಹ ಹಲವು ಪ್ರಶಸ್ತಿಗಳು ಇವರ ಕೀರ್ತಿ ತುರಾಯಿಯಲ್ಲಿ ಹೊಳೆಯುವ ಚೆಲು ರತ್ನಗಳು. ಜೊತೆಗೆ ಯಶೋ ಮಾಧ್ಯಮ ಅವಾರ್ಡ್, ಪಲಿಮಾರು ಶ್ರೀಗಳು ಅನುಗ್ರಹಿಸಿ ನೀಡಿದ ಮಾಧ್ಯಮ ರತ್ನ ಪ್ರಶಸ್ತಿಗಳು ಹೀಗೆ ಹತ್ತು ಹಲವು ಅಭಿನಂದನಾ ಪತ್ರಗಳು ಮನೆಯ ಗೋಡೆಯನ್ನು ಸಿಂಗರಿಸಿವೆ.
“ಕಾಲದೊಂದಿಗೆ ಓಟ” ಕಂಬಳದ ಯಶಸ್ವಿ ಛಾಯಾಚಿತ್ರ ಪ್ರದರ್ಶನ, ನವರಾತ್ರಿ ನವರಸೋತ್ಸವದ “ಆಡಿಸಿದರೆ ಜಗದೋದ್ದಾರನ ” ಛಾಯಾಂಕನ ಪ್ರದರ್ಶನ ‘ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ತಂದಿತ್ತ ” ಯತಿಗಳೊಂದಿಗೆ ಒಂದು ದಿನ” ಎಂಬ ರಾಷ್ಟ್ರೀಯ ಉತ್ಸವದಲ್ಲಿ ಅದಮಾರು ಶ್ರೀಗಳ ದಿನಚರಿಯ ಛಾಯಾಚಿತ್ರ ಪ್ರದರ್ಶನ ಇವರ ವೃತ್ತಿ ಪ್ರವೃತ್ತಿಗಳ ಬೆಲೆಯನ್ನು ಇಮ್ಮಡಿಗೊಳಿಸಿತ್ತು.
ಪ್ರತಿಷ್ಠಿತ ರೋಟರಾಕ್ಟ್ ಕ್ಲಬ್ ಸಗ್ರಿಯ ಉಪಾಧ್ಯಕ್ಷರಾಗಿ, ಮಲ್ಪೆ ಕೊಡವೂರು ರೋಟರಿಯ ಕಾರ್ಯದರ್ಶಿಯಾಗಿ ವೃತ್ತಿಗೆ ಸಂಬಂಧಪಟ್ಟಂತೆ ಉಡುಪಿ ಪ್ರೆಸ್ ಫೋಟೋಗ್ರಾಫರ್ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರಸ್ತುತ ಅದರ ಅಧ್ಯಕ್ಷನಾಗಿ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯನಾಗಿ, ಪ್ರತಿಷ್ಠಿತ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ನ ಜೊತೆ ಕಾರ್ಯದರ್ಶಿಯಾಗಿದ್ದು, ಇತ್ತೀಚೆಗಷ್ಟೇ ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಇವರ ಚುರುಕುತನ ಹಾಗೂ ಕರ್ತವ್ಯನಿಷ್ಟೆಗೆ ಸಂದ ಗೌರವ.
ಪತಿಯ ಜಾಣ್ಮೆಗೆ ಸರಿಸಾಟಿ ಎನಿಸಿರುವ ಪತ್ನಿ – ಅಂಚೆ ಕಛೇರಿ ಉದ್ಯೋಗಿ, ಬಹು ಮುಖ ಪ್ರತಿಭೆ – ಇತ್ತೀಚೆಗಷ್ಟೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ತನ್ನ ಮಡಿಲಿಗೇರಿಸಿಕೊಂಡವರು ಪೂರ್ಣಿಮಾ ಜನಾರ್ದನ್. ಇನ್ನು ಮಕ್ಕಳಾದ ಪೂಜಾ ಹಾಗೂ ಪ್ರಜ್ಞಾ ಎಂಬೆರಡು ಮಣಿರತ್ನಗಳು ತಂದೆ ತಾಯಿಯರ ಕೀರ್ತಿಯನ್ನು ಎತ್ತಿಹಿಡಿದವರು.
ಒಟ್ಟಾರೆ ತನ್ನ ವೃತ್ತಿ ಜೀವನದಲ್ಲಿ ಸುದ್ದಿಗಳ ಮಹಾಪೂರವನ್ನೇ ಸಮಾಜಕ್ಕೆ ಉಣಬಡಿಸುತ್ತ ಯುವ ಬರಹಗಾರರಿಗೂ ಪ್ರೋತ್ಸಾಹವನ್ನು ನೀಡುತ್ತಾ ಅತೀ ಕಡಿಮೆ ಸಮಯದಲ್ಲಿ ಅತ್ಯಂತ ಯಶಸ್ವಿ ಮಾಧ್ಯಮವನ್ನಾಗಿ ಪರಿವರ್ತಿಸಿ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಅಲೆಯೊಂದನ್ನು ಹುಟ್ಟು ಹಾಕುತ್ತಿರುವ ಕಾರ್ಯವೈಖರಿಗೆ ಜನಾರ್ದನ್ ಕೊಡವೂರು ರವರಿಗೆ PRCI ಉಡುಪಿ- ಮಣಿಪಾಲ ಘಟಕವು ವಿಶ್ವ ಸಂವಹನ ದಿನಾಚರಣೆಯ ಅಂಗವಾಗಿ ” *ಕರಾವಳಿ ಇ – ಧ್ವನಿ ಪುರಸ್ಕಾರ* ” ವನ್ನು ನೀಡಿ ಗೌರವಿಸುತ್ತಿದೆ.
~ ರಾಜೇಶ್ ಭಟ್ ಪಣಿಯಾಡಿ*