ಉಡುಪಿ: ಡೆನ್ಮಾರ್ಕ್ ನಲ್ಲಿ ಅ.24 ರಂದು ನಡೆದ ಅಂಡರ್ 19 ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ವಿಭಾಗದಲ್ಲಿ ಕಾರ್ಕಳ ತಾಲೂಕಿನ ಸಾಣೂರಿನ ಆಯುಷ್ ಶೆಟ್ಟಿ ಅವರು ಚಿನ್ನದ ಪದಕ ಗಳಿಸಿದ್ದಾರೆ.
ಇವರು ರಾಮ್ ಪ್ರಕಾಶ್ ಶೆಟ್ಟಿ ಮತ್ತು ಶಾಲ್ಮಿಲಿ ಶೆಟ್ಟಿ ದಂಪತಿಯ ಪುತ್ರ.
ಆಯುಷ್ ಶೆಟ್ಟಿ ಬ್ಯಾಡ್ಮಿಂಟನ್ ನಲ್ಲಿ ಅಪ್ರತಿಮ ಸಾಧನೆ ಮಾಡುತ್ತಿರುವ ಪ್ರತಿಭಾನ್ವಿತ ಬ್ಯಾಡ್ಮಿಂಟನ್ ಪಟು. ಬ್ಯಾಡ್ಮಿಂಟನ್ ನಲ್ಲಿ ಸತತ 13 ಬಾರಿ ಚಾಂಪಿಯನ್ ಆಗಿರುವ ಆಯುಷ್, ರಾಜ್ಯದ ಅಗ್ರಮಾನ್ಯ ಆಟಗಾರರಾಗಿದ್ದಾರೆ.
ಇವರು ಅಂಡರ್ 13 ವಿಭಾಗದಲ್ಲಿ ಆಡುತ್ತಿದ್ದಾಗ ದೇಶದಲ್ಲೇ ಪ್ರಥಮ ರ್ಯಾಂಕಿಂಗ್ ನಲ್ಲಿದ್ದರು. ಅಂಡರ್ 15 ವಿಭಾಗದಲ್ಲೂ ಹಲವಾರು ಪ್ರಶಸ್ತಿಗಳನ್ನು ಗೆದ್ದು, ದಾಖಲೆ ನಿರ್ಮಿಸಿದ್ದರು. ಇದೀಗ ಅಂಡರ್ 19 ವಿಭಾಗದಲ್ಲೂ ತನ್ನ ಸಾಧನೆಯನ್ನು ಮುಂದುವರಿಸಿದ್ದು, ಈಚೆಗೆ ಡೆನ್ಮಾರ್ಕ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಆ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲೂ ತನ್ನ ಸಾಧನೆ ಮೆರೆಯುತ್ತಿದ್ದಾರೆ.
ಆಯುಷ್ ಸಾಧನೆಗೆ ಹಲವು ಪ್ರಶಸ್ತಿಗಳು ಬಂದಿದ್ದು, ರಾಜ್ಯ ಸರ್ಕಾರದ ಕ್ರೀಡಾ ಪ್ರೋತ್ಸಾಹ ಪ್ರಶಸ್ತಿ ಕೂಡ ಲಭಿಸಿದೆ.
ಬಾಲ್ಯದಿಂದಲೇ ಆಸಕ್ತಿ:
ಬಾಲ್ಯದಿಂದಲೇ ಬ್ಯಾಡ್ಮಿಂಟನ್ ಬಹಳ ಆಸಕ್ತಿ ತೋರುತ್ತಿದ್ದ. ಹೀಗಾಗಿ ನಾವೂ ಕೂಡ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಿದ್ದೇವೆ. ಆರಂಭದಲ್ಲಿ ನಾನೇ ತರಬೇತಿ ನೀಡುತ್ತಿದ್ದೆ. ಆತನ ಆಟ ನೋಡಿ ಪ್ರೊಫೆಶನಲ್ ತರಬೇತುದಾರರ ಬಳಿ ಕಳುಹಿಸಿದ್ದೇವೆ. ಇದರಿಂದ ಮತ್ತಷ್ಟು ಸಾಧನೆ ಮಾಡುವಂತಾಯಿತು ಎನ್ನುತ್ತಾರೆ ಆಯುಷ್ ತಂದೆ ರಾಮ್ ಪ್ರಕಾಶ್ ಶೆಟ್ಟಿ.