ಜನಪ್ರಿಯ ಟಿವಿ ಧಾರಾವಾಹಿ ‘ದಿ ಟ್ವೈಲೈಟ್ ಝೋನ್’ನ ಒಂದು ಕಂತು ‘ಎ ಕೈಂಡ್ ಆಫ್ ಎ ಸ್ಟಾಪ್ ವಾಚ್’ದಲ್ಲಿ (೧೯೬೩). ಒಬ್ಬಾತನಿಗೆ ಸ್ಟಾಪ್ ವಾಚೊಂದನ್ನು ಉಡುಗೊರೆಯಾಗಿ ಕೊಟ್ಟಿರುತ್ತದೆ. ತನ್ನೊಡೆಯನ ಹೊರತಾಗಿ ಬೇರೆಲ್ಲದಕ್ಕೂ ಮತ್ತು ಬೇರೆಲ್ಲರಿಗೂ ಸಮಯವನ್ನೇ ನಿಲ್ಲಿಸಬಲ್ಲದು ಈ ಸ್ಟಾಪ್ ವಾಚ್. ಆ ಮನುಷ್ಯ ಈ ಸ್ಟಾಪ್ ವಾಚನ್ನು ಬ್ಯಾಂಕ್ ದರೋಡೆ ಮಾಡಲು ಉಪಯೋಗಿಸುತ್ತಾನೆ. ಕಂತೆ, ಕಂತೆ ನೋಟುಗಳನ್ನು ಒಯ್ಯುತ್ತಿರುವಾಗ ಆಕಸ್ಮಿಕವಾಗಿ ಸ್ಟಾಪ್ ವಾಚನ್ನು ಕೆಳಗೆ ಬೀಳಿಸಿ, ಒಡೆದು ಹಾಕುತ್ತಾನೆ.
ಒಮ್ಮೆಲೇ, ಇಡೀ ಜಗತ್ತಿನ ಜನರು ಮತ್ತು ಸರ್ವವೂ ಶಾಶ್ವತವಾಗಿ, ನಿಶ್ಚಲವಾಗಿ ನಿಂತು ಬಿಡುತ್ತವೆ. ಇದರಿಂದ ದಿಗ್ಭ್ರಾಂತನಾದ ಆ ಮನುಷ್ಯ, ದಿಗಿಲಿನಲ್ಲೇ ಸುತ್ತಲೂ ಎಲ್ಲೆಲ್ಲೋ ಓಡಾಡುತ್ತಾನೆ. ಆದರೆ ಏನೂ ಪ್ರಯೋಜನವಾಗುವುದಿಲ್ಲ. ಆಗ ಕೊನೆಯ ನಿರೂಪಣೆ ಕೇಳುತ್ತೇವೆ, “ಆ ಮನುಷ್ಯನಿಗೆ ಸಮಯದ ಕಾಣಿಕೆ ನೀಡಲಾಗಿತ್ತು. ಅವನು ಅದನ್ನು ಬಳಸಿದ ಮತ್ತು ದುರ್ಬಳಕೆ ಮಾಡಿಕೊಂಡ”.
ಸುತ್ತಲೂ ಜತೆಗಿರಲು ಅಥವಾ ಮಾತಾಡಲು ಅಥವಾ ಪ್ರೀತಿ ಮಾಡಲು ಯಾರೂ ಇಲ್ಲದೆ ಹೋದಾಗ, ಅಷ್ಟೊಂದು ಹಣವನ್ನು ಅವನೇನು ಮಾಡಿಯಾನು? ತಕ್ಷಣವೇ ಆ ಹಣದ ಮೌಲ್ಯ, ಶ್ರೀಮಂತನಾಗುವುದು, ಅತಿ ಶ್ರೀಮಂತನಾಗುವುದು, ಬೇರೆಯವರಿಗಿಂತ ಉನ್ನತ ವ್ಯಕ್ತಿಯಾಗಿರುವುದರ ಪ್ರಾಮುಖ್ಯತೆ ಸಂಪೂರ್ಣ ‘ಅರ್ಥರಹಿತ’ವಾಗಿ ಬಿಡುತ್ತದೆ. ಹಾಗಿದ್ದರೆ, ಯಾವುದು ಹೆಚ್ಚು ಮುಖ್ಯವಾದುದು? ಹಣವೋ ಅಥವಾ ಜನರೋ? ಉತ್ತರ ‘ಜನರು’ ಎಂದಾದರೆ ನಾವೇಕೆ ಯಾವಾಗಲೂ ಇತರರ ಮೇಲೆ ಮೇಲುಗೈ ಸಾಧಿಸಲು ಪ್ರಯತ್ನಿಸುತ್ತಿರುತ್ತೇವೆ? ಸದಾ ನಾವು ಬೇರೆಯವರಿಗಿಂತಲೂ ಶ್ರೇಷ್ಠರೆಂದು ನಿರೂಪಿಸಲು ಬಯಸುತ್ತೇವೆ ಮತ್ತು ಅದಕ್ಕಾಗಿ ನಾವು ಯಾವ ಮಟ್ಟಕ್ಕೆ ಬೇಕಾದರೂ ಹೋಗಬಹುದು. ಕದನಗಳು, ಯುದ್ಧಗಳಲ್ಲಿ ಹೋರಾಡಬಹುದು ಅಥವಾ ನಮ್ಮನ್ನು ನಾವೇ ವಿಭಜಿಸಿಕೊಳ್ಳಬಹುದು. ನಾಳೆ, ಒಬ್ಬ ವ್ಯಕ್ತಿ, ಭೂಮಿಯನ್ನು ಆಳುವವನು, ಡೈನೋಸಾರ್ ಗಳ ಹಾಗೆ ಅಳಿದು ಹೋಗಿ, ಭೂಮಿಯ ಇತಿಹಾಸದ ಭಾಗವಾಗಿ ಹೋದನೆಂದರೆ, ಆಗ ಅದರ ಕಾರಣ ಆ ಮನುಷ್ಯನೇ ಆಗಿರುತ್ತಾನೆ ಎಂದು ಖಚಿತವಾಗಿ ಹೇಳಬಲ್ಲೆ.
ಈ ಭಯಾನಕ ಆಲೋಚನೆ ಹಿಂದೂ ಪುರಾಣಗಳಲ್ಲಿ ಬರುವ ರಾಕ್ಷಸ ‘ಭಸ್ಮಾಸುರ’ನ ಕಥೆಯನ್ನು ನೆನಪಿಸುತ್ತದೆ. ನಮಗೆಲ್ಲ ತಿಳಿದಿರುವಂತೆ ಆ ರಾಕ್ಷಸನಿಗೆ, ಯಾರ ತಲೆಯನ್ನು ಅವನ ಕೈಯಿಂದ ಮುಟ್ಟುವನೋ ಅವರು ಒಡನೆಯೇ ಭಸ್ಮವಾಗಿ ಹೋಗುವರೆಂಬ ವರ ಕೊಡಲಾಗಿತ್ತು. ಮಹಾವಿಷ್ಣುವಿನ ಸ್ತ್ರೀ ಅವತಾರವಾದ ಮೋಹಿನಿಯು ಉಪಾಯದಿಂದ ಭಸ್ಮಾಸುರನು ತನ್ನ ತಲೆಯನ್ನು ತಾನೇ ಮುಟ್ಟಿಕೊಳ್ಳುವಂತೆ ಮಾಡುತ್ತಾಳೆ. ಸದಾ ಇತರರಿಗಿಂತಲೂ ನಾವೇ ಶ್ರೇಷ್ಠರೆಂಬ ಭಾವವನ್ನು ವಿನಾಶದ ಮೂಲಕ ಸಾಧಿಸಲು ಪ್ರಯತ್ನ ಪಡುತ್ತಿದ್ದರೆ ಮನುಷ್ಯನ ಹಣೆಬರಹವೂ ಈ ರಾಕ್ಷಸನದಂತೆಯೇ ಆಗಬಹುದು.
ಕುಂಚದಲ್ಲಿ ಬಿಡಿಸಿದ ಚಿತ್ರಗಳು, ಛಾಯಾಚಿತ್ರಗಳು ಅಥವಾ ಯುದ್ಧ, ಬಾಂಬುಗಳನ್ನು ಹಾಕುವ, ಚಿತ್ರಹಿಂಸೆ, ನೋವು, ದುಃಖ, ಸಮಾಧಿಗಳು ಅಥವಾ ಯಾರದಾದರೂ ಸಾವನ್ನು ತೋರಿಸುವ ಚಲನಚಿತ್ರಗಳನ್ನು ನೋಡುವಾಗ ಅತ್ಯಂತ ಸಂಕಟ ಅನುಭವಿಸುತ್ತೇನೆ. ನೋವು, ಅಂತ್ಯ ಅಥವಾ ವಿನಾಶವನ್ನು ನೋಡಿದ ಮೇಲೆ ನನ್ನಲ್ಲಿ ಮೂಡುವ ವಾತ್ಸಲ್ಯ, ಸಹಾನುಭೂತಿ ಭಾವನೆಗಳು ಪರಿಚಿತ ಅಥವಾ ಅಪರಿಚಿತ ವ್ಯಕ್ತಿಯಲ್ಲಿ ಅವನು ಬದುಕಿರುವಾಗ ಏಕೆ ಹುಟ್ಟುವುದಿಲ್ಲ?
ವೈಜ್ಞಾನಿಕ, ಕಾಲ್ಪನಿಕ, ರೋಮಾಂಚಕ ಚಲನಚಿತ್ರ ‘ಗ್ರಾವಿಟಿ’ (೨೦೧೩)ಯಲ್ಲಿ ಗಗನಯಾತ್ರಿಗಳು ಅಂತರಿಕ್ಷದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಮತ್ತು ಅಲ್ಲಿ ಯಾರೆಂದರೆ ಯಾರೂ ಇಲ್ಲ, ಯಾವುದೇ ಸದ್ದೂ ಇಲ್ಲ. ಅಲ್ಲಿ ಮೇಲೆ, ಅಂತರಿಕ್ಷದಲ್ಲಿ, ಅವರುಗಳು ಮಾತ್ರ ಇದ್ದಾರೆ. ಆ ಸಿನಿಮಾ ನೋಡುವಾಗ, ನಾನೂ ಅಂತರಿಕ್ಷದಲ್ಲಿ ಇರುವ ಹಾಗೆ ಭಾಸವಾಗಿ, ಆ ಗಗನಯಾತ್ರಿಗಳಂತೆಯೇ ನಾನೂ ಭಯಾನಕ ಒಂಟಿತನವನ್ನು ಅನುಭವಿಸಿದೆ. ಆದರೆ, ಆ ಸಿನಿಮಾದಲ್ಲಿ, ನಮ್ಮ ಭೂಗ್ರಹಕ್ಕೆ ಆ ಗಗನಯಾತ್ರಿಗಳು ಮರಳುವಾಗ, ಅವರ ಜೊತೆಯಲ್ಲೇ ನಾವೆಲ್ಲರೂ ವಿಧವಿಧವಾದ ಶಬ್ದಗಳನ್ನು ಕೇಳುತ್ತೇವೆ. ಅದು ಅಷ್ಟು ಹಿತವಾಗಿತ್ತು. ಅದನ್ನು ಕೇಳುತ್ತಿರುವ ಹಾಗೆಯೇ ಇದ್ದಕ್ಕಿದ್ದಂತೆ ನನಗೆ ಆರಾಮವೆನಿಸತೊಡಗಿತು. ಕೊನೆಯಲ್ಲಿ ‘ಹೋಂ ಸ್ವೀಟ್ ಹೋಂ’ ಜನರ ಮಧ್ಯದಲ್ಲಿ ಇರುವುದನ್ನು ಬಹಳ ಇಷ್ಟಪಟ್ಟೆ..
ಜನರ ಮಹತ್ವ ಏನೆಂದು ನನಗೆ ತಿಳಿದಿತ್ತು. ಸಿನಿಮಾ ಮುಗಿದು ಇತರ ಪ್ರೇಕ್ಷಕರನ್ನು ನೋಡಿದಾಗ ಅವರೆಲ್ಲರೊಡನೆ ಒಂದು ಬಲವಾದ ನಂಟು ಭಾಸವಾಯಿತು. ಪ್ರತಿಯೊಬ್ಬರ ಮೇಲೂ ಅಕ್ಕರೆ ಉಂಟಾಗತೊಡಗಿತು. ಅವರ ಬಣ್ಣ ಅಥವಾ ಜನಾಂಗವನ್ನು ಗಮನಿಸುವುದು ಅಥವಾ ಲಕ್ಷಿಸುವುದು ನನಗೆ ಬೇಕಿರಲಿಲ್ಲ. ಅವರ ಧರ್ಮ ಯಾವುದು, ಜಾತಿ ಯಾವುದು, ಅಥವಾ ಯಾವ ಭಾಗ ಅಥವಾ ರಾಜ್ಯದಿಂದ ಅವರು ಬೆಂಗಳೂರಿಗೆ ಬಂದಿರಬಹುದೆಂಬುದನ್ನು ತಿಳಿದುಕೊಳ್ಳುವುದರಲ್ಲೇ ಆಗಲಿ, ಊಹಿಸುವುದರಲ್ಲೇ ಆಗಲಿ, ನನಗೆ ಆಸಕ್ತಿಯೇ ಇರಲಿಲ್ಲ. ಏಕೆಂದರೆ, ಆಗ ತಾನೇ, ‘ವಸುಧೈವ ಕುಟುಂಬಕಂ’ ನುಡಿಯ ನಿಜವಾದ ಅರ್ಥವನ್ನು, ನಾವೆಲ್ಲಾ ಒಂದೇ ಕುಟುಂಬದವರು ಎಂಬುದನ್ನು ಮತ್ತು ‘ಮನುಕುಲ’ದ ನಿಜ ಮೌಲ್ಯವನ್ನು ಆಗ ಅರಿತುಕೊಂಡಿದ್ದೆ.
ಅನಿರುದ್ಧ
ನಟ, ಗಾಯಕ ಮತ್ತು ನಿರ್ದೇಶಕ
ಕನ್ನಡಕ್ಕೆ ಅನುವಾದ ಮಾಡಿದವರು: ಜಯಶ್ರೀ