ಕ್ಯಾಬೆಜ್ ಅಂಬೊಡೆ, ಗುಳ್ಳದ ಪೋಡಿ, ಬಿಸಿ ಬಿಸಿ ಇಡ್ಲಿ ಸಾಂಬರ್, ಮಧ್ಯಾಹ್ನಕ್ಕೆ ಅನ್ನ, ತಿಳಿ ಸಾರು, ದಾಳಿತೊವ್ವೆ, ರುಚಿ ರುಚಿ ಉಪ್ಪಿನಕಾಯಿ, ಅಲಸಂಡೆ ಉಪ್ಕರಿ, ಬಿಟ್ರೂಟ್ ಪಲ್ಯ, ರಸಂ, ದೊಡ್ಡದ್ದೊಂದು ಹಪ್ಪಳ ಇವೆಲ್ಲ ಆಗುಂಬೆಯ ಸುರೇಂದ್ರ ನಾಯಕ್ ಮಾಮನ ಮನೆಯಂತಹ ಹೊಟೇಲಿನ ಬಾಯಿಬಿರಿಸೋ ಖಾದ್ಯಗಳು.
ಆಗುಂಬೆ-ಕೊಪ್ಪ ದಾರಿಯಲ್ಲಿ ಸುಮಾರು 40 ವರ್ಷಗಳಿಂದಲೂ ಗುರುಪ್ರಸಾದ್ ಹೊಟೇಲ್ ನಡೆಸುತ್ತಿರುವ ನಾಯಕ್ ಮಾಮನ ಹೊಟೇಲ್ನಲ್ಲಿ ಕೂತು ಊಟ ಮಾಡುತ್ತಲೋ, ಅಂಬೊಡೆ ಮುಕ್ಕುತ್ತಲೋ ಆಗುಂಬೆಯ ಕಾಡನ್ನು ನೋಡುವುದೇ ಒಂದು ಚೆಂದ ಅನುಭವ.
ಊರ ಸೊಗಡಿನ ಹೊಟೇಲ್ ಗೊಮ್ಮೆ ಬನ್ನಿ:
ನಾಯಕ್ ಮಾಮನ ಹೊಟೇಲ್ ನಲ್ಲಿ ಪಕ್ಕಾ ಲೋಕಲ್ ಸೊಗಡಿದೆ, ಸೊಗಸಿದೆ. ಬೆಳಗ್ಗೆ, ಮಧ್ಯಾಹ್ನದ ಹೊತ್ತು ಈ ಹೊಟೇಲ್ ದಾಟುತ್ತಿದ್ದಂತೆಯೇ ಬಗೆಬಗೆ ಖಾಧ್ಯಗಳ ಪರಿಮಳಗಳು” ಬಾ ಬಾ ತಿನ್ನು ಎಂದು ಬಾಯಿಯನ್ನು ಆಹ್ವಾನಿಸುತ್ತದೆ. ಇಲ್ಲಿನ ಗರಮಾಗರಂ ದಾಳಿತೊವ್ವೆಯ ಜೊತೆ ಇಡ್ಲಿ ಮುಳುಗಿಸಿ ತಿಂದರಂತೂ ಸ್ವರ್ಗವೋ ಸ್ವರ್ಗ. ಅಂದ ಹಾಗೆ, ನಾಯಕ್ ಮಾಮನ ಅಂಗಡಿಲಿ ಊಟದ ಜೊತೆ ಜೊತೆಗೆ ಅವರ ಮಲೆನಾಡು ಹಾಸ್ಯ, ಮಾತಿನ ಚಟಾಕಿಯೂ ಸವಿಯಲು ಸಿಗುತ್ತದೆ. ಮಲೆನಾಡಿನ ಅಪ್ಪಟ ಖಾದ್ಯಗಳು, ಮಲೆನಾಡು ಕಷಾಯದ ಪುಡಿ, ಜೇನುತುಪ್ಪ, ಉಪ್ಪಿನಕಾಯಿ, ಸಂಡಿಗೆ ಮೊದಲಾದ ಬಗೆ ಬಗೆ ವೈವಿದ್ಯ ಕೂಡ ಇವರ ಹೊಟೇಲ್ ನಲ್ಲಿ ಸಿಗುತ್ತದೆ. ಆಗುಂಬೆ ಸುತ್ತಿ, ಹೊಟ್ಟೆ ಗಟ್ಟಿ, ಮನಸ್ಸು ತೃಪ್ತಿಯಾಗಬೇಕೆಂದರೆ ಒಮ್ಮೆ ಹೊಟೇಲ್ ಗುರುಪ್ರಸಾದ್ ಗೆ ಹೊಕ್ಕಿ ಅಪ್ಪಟ ಮನೆಸೊಗಡಿನ ಗುಣಮಟ್ಟದ ಊಟವನ್ನು ಒಮ್ಮೆ ಸವಿದು ನೋಡಿ. ಬಾಯಿ ಬೊಂಬಾಟ್ ಆಗುವುದರಲ್ಲಿ ನೋ ಡೌಟ್.
-ಪ್ರಸಾದ್ ಶೆಣೈ