ಕಿನ್ನಿಗೋಳಿ: ನೇಕಾರರ ಉತ್ಪಾದಕ ಕಂಪನಿಯನ್ನು ( weavers OFPO ) ರಚಿಸುವ ವಿಚಾರದಲ್ಲಿ ರಾಜ್ಯ ಕೈಮಗ್ಗ ಇಲಾಖೆ ನೀಡಿರುವ ನಿರ್ದೇಶನದ ಕುರಿತು ಚರ್ಚಿಸಲು ಸಹಾಯಕ ನಿರ್ದೇಶಕರು, ಕೈ ಮಗ್ಗ ಮತ್ತು ಜವಳಿ ಇಲಾಖೆ ಉಡುಪಿ ಮತ್ತು ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಪೂರ್ವಭಾವಿ ಸಭೆ ಕಿನ್ನಿಗೋಳಿಯ ತಾಳಿಪಾಡಿ ನೇಕಾರ ಸಂಘದಲ್ಲಿ ನಡೆಯಿತು.
ಉಡುಪಿ ಜಿಲ್ಲಾ ಕೈಮಗ್ಗ ಸಹಾಯಕ ನಿರ್ದೇಶಕ ಅಶೋಕ್ ಪ್ರಸ್ತಾವನೆ ಮಾಡಿ ನೇಕಾರರ ಉತ್ಪಾದಕ ಕಂಪನಿಯನ್ನು ರಚಿಸಲು ಇಲಾಖೆಯಿಂದ ಬಂದಿರುವ ನಿರ್ದೇಶನದ ಕುರಿತು ತಿಳಿಸಿದರು.
ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ, ನಬಾರ್ಡ್ ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ತಿಳಿಸಿ ನಬಾರ್ಡ್ ನಿರ್ದೇಶನದ ಬಗ್ಗೆ ಮಾಹಿತಿ ನೀಡಿದರು. ದ ಕ ಜಿಲ್ಲಾ ಕೈ ಮಗ್ಗ ಇಲಾಖೆಯ ಸಹಾಯಕ ನಿರ್ದೇಶಕ ಶಿವ ಶಂಕರ್ ಇಲಾಖೆಯ ನೆರವಿನ ಬಗ್ಗೆ ಮಾಹಿತಿ ನೀಡಿದರು.
ನೇಕಾರರ ಉತ್ಪಾದಕ ಸಂಸ್ಥೆಯನ್ನು ರಚಿಸಲು ಇರುವ ಸಾಧಕ ಭಾದಕಗಳನ್ನು ಚರ್ಚಿಸಲಾಯ್ತು. ವಿವಿಧ ಸಂಘಗಳ ಪದಾಧಿಕಾರಿಗಳು ಈ ಪರಿವರ್ತನೆಯ ಸಂದರ್ಭದಲ್ಲಿ ಈಗಿನ ಸಹಕಾರಿ ವ್ಯವಸ್ಥೆಯ ಉಳಿವಿನ ಬಗ್ಗೆ ಆತಂಕ ವ್ಯಕ್ತ ಪಡಿಸಿದರು.
ಹೊಸ ನಿರ್ದೇಶನದ ಪ್ರಕಾರ ಕನಿಷ್ಠ 150 ಜನ ಉತ್ಪಾದಕರು ಖಡ್ಡಾಯವಾಗಿ ಇರಬೇಕಾದ ನಿಭಂದನೆ ಇಲ್ಲಿನ ಪರಿಸ್ಥಿತಿಗೆ ಹೊಂದುವುದಿಲ್ಲ ಎಂದು ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಇದು ಮೊದಲಿನ ಹಂತದ ಸಭೆಯಾಗಿದ್ದು ಇನ್ನೂ ಸರಿಯಾದ ನಿರ್ದೇಶನ ಬರದೇ ಆತಂಕ ಪಡುವ ಅಗತ್ಯ ಇಲ್ಲಾ ಹಾಗೂ ಸಹಕಾರಿ ಸಂಘಗಳಿಗೆ ಇದರಿಂದ ಯಾವುದೇ ಧಕ್ಕೆ ಬರುವುದಿಲ್ಲ ಎಂದು ಇಲಾಖೆಯ ಪರವಾಗಿ ನಿರ್ದೇಶಕರುಗಳು ಭರವಸೆ ನೀಡಿದರು.
ದ ಕ ಮತ್ತು ಉಡುಪಿ ಜಿಲ್ಲೆಗಳ ಎಲ್ಲಾ ಕೈಮಗ್ಗ ಸಹಕಾರಿ ಸಂಘಗಳ ಆಡಳಿತ ನಿರ್ದೇಶಕರು ಮತ್ತು ಅಧ್ಯಕ್ಷರು ಮತ್ತು ಕದಿಕೆ ಟ್ರಸ್ಟ್ ನ ಟ್ರಸ್ಟಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ತಾಳಿಪಾಡಿ, ಪಡುಪಣಂಬೂರು, ಉಡುಪಿ , ಶಿವಳ್ಳಿ ಮತ್ತು ಬ್ರಹ್ಮಾವರ ನೇಕಾರ ಸಂಘಗಳ ಆಡಳಿತ ವರ್ಗದವರು ,ಕದಿಕೆ ಟ್ರಸ್ಟ್ ಟ್ರಸ್ಟೀಗಳು ಮತ್ತು ತಾಳಿಪಾಡಿ ಸಂಘದ ನೇಕಾರರು ಭಾಗವಹಿಸಿದ್ದರು.