ಆನಸ್ ಶ್ರೇಯಸ್
ಬ್ರಹ್ಮಾವರ: ನದಿಯಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬ್ರಹ್ಮಾವರ ಉಗ್ಗೇಲುಬೆಟ್ಟು ಮಡಿಸಾಲು ಎಂಬಲ್ಲಿ ನಡೆದಿದೆ.
ಮೃತ ಬಾಲಕರನ್ನು ಆನಸ್ (16) ಹಾಗೂ ಶ್ರೇಯಸ್ (18) ಎಂದು ಗುರುತಿಸಲಾಗಿದೆ. ಈ ಇಬ್ಬರು ಸಹಿತ ಮೂವರು ಬಾಲಕರು ನದಿಯಲ್ಲಿ ಈಜಲು ಹೋಗಿದ್ದರು.
ಈ ವೇಳೆ ಇಬ್ಬರು ಬಾಲಕರು ನೀರಿನ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿದ್ದು, ಮತ್ತೊಬ್ಬ ಬಾಲಕ ಪಾರಾಗಿದ್ದಾನೆ. ಆದರೆ, ಆತ ಭಯಗೊಂಡು ಈ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಹೀಗಾಗಿ ಕಾಣೆಯಾಗಿದ್ದ ಬಾಲಕರ ಮನೆಯವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ದೂರು ದಾಖಲಿಸಿಕೊಂಡು ಪಾರಾದ ಬಾಲಕನನ್ನು ವಿಚಾರಣೆ ನಡೆಸಿದಾಗಿ ಬಾಲಕರು ನೀರುಪಾಲಾದ ವಿಚಾರ ಗೊತ್ತಾಗಿದೆ. ಕೂಡಲೇ ಸ್ವರ್ಣಾ ನದಿಯಲ್ಲಿ ಶೋಧ ಕಾರ್ಯ ನಡೆಸಿದ್ದು, ಈಜು ಪಟು ಈಶ್ವರ್ ಅವರನ್ನು ಕರೆಸಿಕೊಂಡು ಕಾರ್ಯಾಚರಣೆ ನಡೆಸಲಾಯಿತು.
ಆದರೆ ನಿನ್ನೆ ಬಾಲಕರ ಮೃತದೇಹ ಪತ್ತೆಯಾಗಿರಲಿಲ್ಲ. ಇಂದು ಬೆಳಿಗ್ಗೆ ಇಬ್ಬರು ಬಾಲಕರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












