ಮಗನ ಮೇಲೆ ಗುಂಡು ಹಾರಿಸಿ ತಂದೆ: ಕೆಲಸದಾಳು ಬಚಾವ್

ಮಂಗಳೂರು: ತಂದೆಯೇ ತನ್ನ‌ ಮಗನ ಮೇಲೆ ಗುಂಡು ಹಾರಿಸಿದ ಘಟನೆ ಮಂಗಳೂರಿನ ಮೋರ್ಗನ್ಸ್ ಗೇಟ್ ಬಳಿ ಇಂದು ಸಂಜೆ ಸಂಭವಿಸಿದೆ.

ಬಾಲಕ ಸುಧೀಂದ್ರ (14) ತಲೆಗೆ ಗುಂಡು ತಗುಲಿದ್ದು, ಗಂಭೀರ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ.

ಮೋರ್ಗನ್ ಗೇಟ್ ವೈಷ್ಣವಿ ಎಕ್ಸ್ ಪ್ರೆಸ್ ಕಾರ್ಗೋ ಪ್ರೈ.ಲಿ. ಸಂಸ್ಥೆಯ ಮಾಲೀಕ ರಾಜೇಶ್ ಪ್ರಭು ಗುಂಡು ಹಾರಿಸಿದ ತಂದೆ. ಇವರ ಕಚೇರಿಗೆ ಕೆಲಸದವರೊಬ್ಬರು ಸಂಬಳ ಕೇಳಲು ಬಂದಿದ್ದು, ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು ಗಲಾಟೆ ನಡೆದಿದೆ.

ಈ ವೇಳೆ ಸಿಟ್ಟಿಗೆದ್ದ ರಾಜೇಶ್ ಪ್ರಭು ತನ್ನ ಬಳಿ ಇದ್ದ ರಿವಾಲ್ವಾರ್ ನಿಂದ ಫೈರಿಂಗ್ ಮಾಡಿದ್ದಾರೆ. ಅದು ಗುರಿ ತಪ್ಪಿ ತನ್ನ ಮಗನ ತಲೆಗೆ ಬಿದ್ದಿದೆ. ಮಗ ಸುಧೀಂದ್ರನ ತಲೆಯ ಭಾಗಕ್ಕೆ ಗುಂಡು ಬಿದ್ದಿದ್ದು, ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಸಂಬಳ ಕೇಳಲು ಬಂದಿದ್ದ ಕೆಲಸದಾಳು ಅಪಾಯದಿಂದ ಪಾರಾಗಿದ್ದಾನೆ.

ಪಾಂಡೇಶ್ವರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಸ್ಥಳಕ್ಕೆ ಪೊಲೀಸ್ ಕಮಿಷನರ್ ಶಶಿಕುಮಾರ್ ಆಗಮಿಸಿದ್ದಾರೆ. ಗುಂಡಿನ ಶಬ್ದ ಕೇಳಿಸುತ್ತಿದ್ದಂತೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.