ಕೃಷ್ಣಾಂಗಾರಕ ಸ್ನಾನ ಘಟ್ಟದಲ್ಲಿ ಪವಿತ್ರ ಸ್ವರ್ಣಾನದಿ ಸ್ನಾನ: ನೂರಾರು ಮಂದಿ ಭಾಗಿ

ಮಣಿಪಾಲ: ಕೃಷ್ಣಾಂಗಾರಕ ಚತುರ್ದಶಿ ಪ್ರಯುಕ್ತ ಮಣಿಪಾಲ-ಪೆರಂಪಳ್ಳಿಯ ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನದ ಬಳಿ ಇರುವ ಕೃಷ್ಣಾಂಗಾರಕ ಸ್ನಾನ ಘಟ್ಟದಲ್ಲಿ ಮಂಗಳವಾರ ನೂರಾರು ಮಂದಿ ಪವಿತ್ರ ನದಿ ಸ್ನಾನ ಮಾಡಿದರು.

ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹಾಗೂ ಶಿರೂರು ಮಠ ವೇದವರ್ಧನತೀರ್ಥ ಶ್ರೀಪಾದರು ಪವಿತ್ರ ನದಿ ಸ್ನಾನಗೈದು ಸುವರ್ಣೆಗೆ ಆರತಿ ಬೆಳಗಿದರು.‌

ಪವಿತ್ರ ಪುಣ್ಯಸ್ನಾನಕ್ಕಾಗಿ ಉಡುಪಿ ಸಹಿತ ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಆಂಧ್ರದ ಚಿತ್ತೂರಿನಿಂದಲೂ ಭಕ್ತರು ಆಗಮಿಸಿದ್ದರು.