ಬೆಂಗಳೂರು: ಅಧ್ಯಾತ್ಮಿಕ ಉನ್ನತಿಗೆ ಭಕ್ತಿಯೇ ಶ್ರೇಷ್ಠ ಸಾಧನ. ಯಾವುದೇ ನಿರ್ಬಂಧವಿಲ್ಲದ ಉತ್ಕಟವಾದ ಪ್ರೀತಿಯೇ ಭಕ್ತಿ. ಇಂಥಹ ಶ್ರೇಷ್ಠವಾದ ಭಕ್ತಿಮಾರ್ಗದಲ್ಲಿ ನಡೆದು ಜೀವನ ಸಾರ್ಥಗೊಳಿಸುವ ಬಗೆಯನ್ನು ಈ ನೆಲದಲ್ಲಿ ಅನೇಕ ಮಹಾತ್ಮರು ತೋರಿದ್ದಾರೆ. ಜಗದ್ಗುರು ಮಧ್ವಾಚಾರ್ಯರು ಮತ್ತು ಅವರಿಂದ ಸ್ಥಾಪಿಸಲ್ಪಟ್ಟ ಉಡುಪಿಯ ಮಠಗಳು ಶತಮಾನಗಳಿಂದ ಭಕ್ತಿಯ ಶಕ್ತಿಯನ್ನು ತಿಳಿಸುವ ಸಮರ್ಥ ಕೆಲಸವನ್ನು ಮಾಡುತ್ತಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಸಭಾಂಗಣದಲ್ಲಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ 34 ನೇ ಚಾತುರ್ಮಾಸ್ಯ ವ್ರತ ಸಮಾಪ್ತಿಯ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಮುಖ್ಯ ಅಭ್ಯಾಗತರಾಗಿ ಪಾಲ್ಗೊಂಡು ಮಾತನಾಡಿದರು.
ಭಾರೀ ಮತ್ತು ಮಧ್ಯಮ ಕೈಗಾರಿಕಾ ಮಂತ್ರಿ ಮುರುಗೇಶ ನಿರಾಣಿ , ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಂತ್ರಿ ಬಿ.ಸಿ. ನಾಗೇಶ್, ಇಂಧನ ಮತ್ತು ಕನ್ನಡ – ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ , ಕಾಂಗ್ರೆಸ್ ಮುಖಂಡ ಎಚ್.ಕೆ. ಪಾಟೀಲ್, ಉಡುಪಿ ಶಾಸಕ ಕೆ ರಘುಪತಿ ಭಟ್, ಜೆಡಿಎಸ್ ಮುಖಂಡ ಟಿ.ಎ. ಶರವಣ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ನಡೆದ ಗೋವಿನ ತುಲಾಭಾರದಲ್ಲೂ ಪಾಲ್ಗೊಂಡ ಮುಖ್ಯಮಂತ್ರಿಗಳು ಕೆಲಹೊತ್ತು ಹಸು ಮತ್ತು ಕರುವಿನ ಮೈದಡವಿದರು.
ಪೇಜಾವರ ಶ್ರೀಗಳನ್ನು ಸನ್ಮಾನಿಸಿ ನಾಡಿನ ಸಮಸ್ತ ನಾಗರಿಕರ ಪರವಾಗಿ ಗುರುವಂದನೆ ಸಲ್ಲಿಸಿದ ಬೊಮ್ಮಾಯಿ ಶ್ರೀಗಳ ಅನೇಕ ಕಾರ್ಯ ಚಟುವಟಿಕೆಗಳನ್ನು ಗಮನಿಸುತ್ತಿದ್ದೇನೆ . ಸತ್ಯಸಂಧತೆ ಅವರ ವಿಶೇಷ ಗುಣವಾಗಿದೆ. ಅಯೋಧ್ಯೆಯ ಮಂದಿರ ನಿರ್ಮಾಣದಲ್ಲೂ ಓರ್ವ ವಿಶ್ವಸ್ಥರಾಗಿ ತುಂಬ ಸಕ್ರಿಯರಾಗಿರುವ ಶ್ರೀಗಳು ಈ ನಾಡಿನ ಹೆಮ್ಮೆ ಅವರು ಹಾಗೂ ಶ್ರೀಮಠದ ಯಾವುದೇ ಸಾಮಾಜಿಕ ಹಿತದ ಕಾರ್ಯಗಳಲ್ಲಿ ಸರ್ಕಾರ ಪೂರ್ಣವಾಗಿ ಬೆಂಬಲಕ್ಕಿದೆ ಎಂದರು.
ಪೇಜಾವರ ಶ್ರೀಗಳು ತಮಗೆ ಅರ್ಪಿಸಿದ ಅಭಿವಂದನೆಗೆ ಹರ್ಷ ವ್ಯಕ್ತಪಡಿಸಿ ಗೋವಿನ ಸಂತತಿಯ ಉಳಿವಿಗೆ ಇಡೀ ದೇಶ ಕಂಕಣಬದ್ಧರಾಗಲೇಬೇಕು ಎಂದರು .
ಇದಕ್ಕೂ ಮೊದಲು ವಿದ್ವಾನ್ ಬೆಮ್ಮತ್ತಿ ಶ್ರೀಶಾಚಾರ್ಯರು ಸಂಪಾದಿಸಿದ
ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಮಹಾಭಾರತ ಅಂಕಣಬರಹಗಳ ಸಂಗ್ರಹ ಕೃತಿ ಮಹಾಭಾರತ ಸಾರೋದ್ಧಾರ ಕೃತಿಯನ್ನು ಎಚ್.ಕೆ. ಪಾಟೀಲ್ ಬಿಡುಗಡೆಗೊಳಿಸಿ ಮಾತನಾಡಿದರು. ಪ್ರೊ ಎ. ಹರಿದಾಸ್ ಭಟ್ ಉಪನ್ಯಾಸ ನೀಡಿದರು.
ರಾಜ್ಯಪಾಲ ಟಿ.ಸಿ. ಗೆಹ್ಲೋಟ್ ಕಾರ್ಯಕ್ರಮಕ್ಕೆ ಶುಭಕೋರಿ ಸಂದೇಶ ಕಳುಹಿಸಿದ್ದರು .
ಗೋವಿನದ್ದು ಸಾಟಿ ಇಲ್ಲದ ಸೌಂದರ್ಯ:
ಯಾವ ವಿಶ್ವಸುಂದರಿಯೂ ಗೋವಿಗೆ ಸಮವಲ್ಲ. ಗೋವಿಗೆ ಸಾಟಿ ಇಲ್ಲದ ಸೌಂದರ್ಯವಿದೆ . ಜಗತ್ತಿನ ಯಾವ ವಿಶ್ವಸುಂದರಿಯೂ ಇದಕ್ಕೆ ಸಮವಾಗದು. ಆದರೆ, ಗೋವಿನ ಸೌಂದರ್ಯವನ್ನು ಅಂತಃ ಚಕ್ಷವಿನಂದಷ್ಟೇ ಸವಿಯಲು ಸಾಧ್ಯ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಹಿಂದೊಮ್ಮೆ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಸವಣೂರಿನಲ್ಲಿ ಶ್ರೀ ಮನ್ನ್ಯಾಯ ಸುಧಾ ಮಂಗಲೋತ್ಸವ ನಡೆಸಿದ್ದಾಗ ಪಾಲ್ಗೊಂಡಿದ್ದೆ. ಸಾಮಾನ್ಯವಾಗಿ ಪುರೋಹಿತರೆಂದರೆ ಏನೋ ಪೂಜೆ ಹೋಮ ಮಾಡ್ತಾರೆ ಅಂತ ನಾವೆಲ್ಲ ಜನಸಾಮಾನ್ಯರು ಭಾವಿಸ್ತೇವೆ. ಆದರೆ ಅಲ್ಲಿ ವಾಕ್ಯಾರ್ಥಗೋಷ್ಠಿ ಪರೀಕ್ಷೆಗಳನ್ನು ಕಂಡು ಮೂಕವಿಸ್ಮಿತನಾಗಿದ್ದೆ . ಶ್ರೀಮುನ್ನ್ಯಾಯ ಸುಧಾ ಅಧ್ಯಯನವು ನಮ್ಮ ಐಎಎಸ್ ಐಪಿಎಸ್ ಗೆ ಸಮನಾಗಿದೆ ಎಂದು ಅರಿವಾಯಿತು.
ಮುಗ್ಧತೆಯನ್ನು ಸಾಧಿಸಿದ ಮಹಾನ್ ಯೋಗಿ:
ಬದುಕಿನ ಜಂಜಾಟದಲ್ಲಿ ಪ್ರತೀ ನಿತ್ಯ ಪ್ರತೀಕ್ಷಣ ನಮ್ಮ ಮಾನಸಿಕತೆಯಲ್ಲಿ ವ್ಯತ್ಯಾಸವಾಗ್ತವೆ. ಹುಟ್ಟಿನಿಂದ ಸಾವಿನ ತನಕವೂ ಮಗುವಿನ ಮುಗ್ಧತೆ ಎನ್ನುವುದು ಅಸಾಧ್ಯದ ಮಾತು .ಆದರೆ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಜೀವನಪರ್ಯಂತ ನೂರಾರು ಕಾರ್ಯಚಟುವಟಿಕೆಗಳು , ಆಂದೋಲನ ಚಳವಳಿಗಳಲ್ಲಿ ಭಾಗಿಯಾಗಿ , ತನ್ನ ವಿರುದ್ಧ ಅದೆಷ್ಟೇ ವಿವಾದ ಆರೋಪಗಳು ಬಂದಾಗಲೂ ಮಗುವಿನ ಮುಗ್ಧತೆಯನ್ನು ಸಾಧಿಸಿದ ಮಹಾನ್ ತಪಸ್ವಿ ಎಂದು ಬಣ್ಣಿಸಿದರು .
ವಿದ್ವಾನ್ ಕಟ್ಟಿ ಸತ್ಯಾಧ್ಯಾನಾಚಾರ್ಯ, ಡಾ. ಆನಂದತೀರ್ಥ ನಾಗಸಂಪಿಗೆ, ಡಾ. ಸತ್ಯನಾರಾಯಣ ಆಚಾರ್ಯ, ಕೇಶವಾಚಾರ್ಯ ಟಿ ಪಿ ಅನಂತ್, ವಾಸುದೇವ ಭಟ್ ಪೆರಂಪಳ್ಳಿ, ವಿಷ್ಣುಮೂರ್ತಿ ಆಚಾರ್ಯ, ಕೃಷ್ಣ ಭಟ್, ವೈಕೆ ರಾಘವೇಂದ್ರ ರಾವ್ ಉಪಸ್ಥಿತರಿದ್ದರು.
ವಿ . ಬದರೀನಾಥಾಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಶಾಸಕ ರವಿಸುಬ್ರಹ್ಮಣ್ಯ ಸ್ವಾಗತಿಸಿದರು. ಚಾತುರ್ಮಾಸ್ಯ ಸಮಿತಿ ಪ್ರಮುಖರಾದ ಗೌತಮ್ ವಂದಿಸಿದರು.












