ಉಡುಪಿ: ಉಡುಪಿ ಬ್ಲಾಕ್ ಸಮಿತಿಗೆ ನೂತನ ಅಧ್ಯಕ್ಷರ ನೇಮಕದ ಬೆನ್ನಲ್ಲೇ ಉಡುಪಿ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ.
ಕಳೆದೊಂದು ವರ್ಷದಿಂದ ಪಕ್ಷದೊಳಗೆ ನಡೆಯುತ್ತಿದ್ದ ಬ್ಲಾಕ್ ಅಧ್ಯಕ್ಷರ ಆಯ್ಕೆ ಬಿಕ್ಕಟ್ಟು ಕಡೆಗೂ ಶಮನವಾಗಿದೆ. ಆದರೆ ಇದು ಮತ್ತೊಂದು ಬಂಡಾಯಕ್ಕೆ ಕಾರಣವಾಗಿದೆ. ನೂತನ ಬ್ಲಾಕ್ ಅಧ್ಯಕ್ಷರನ್ನಾಗಿ ರಮೇಶ್ ಕಾಂಚನ್ ಅವರನ್ನು ನೇಮಕಗೊಳಿಸಿ ಹೆಸರು ಘೋಷಣೆ ಆಗುತ್ತಿದ್ದಂತೆ, ಪಕ್ಷದೊಳಗೆ ಅಸಮಾಧಾನ ಸ್ಫೋಟಗೊಂಡಿದೆ. ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ ಸಮಾಜಸೇವಕ ಕೆ. ಕೃಷ್ಣಮೂರ್ತಿ ಆಚಾರ್ಯ ಅವರ ಬೆಂಬಲಿಗರು ಪಕ್ಷದ ವಿರುದ್ಧ ಸಿಡಿದೆದ್ದಿದ್ದಾರೆ.
ಕೃಷ್ಣಮೂರ್ತಿ ಆಚಾರ್ಯ ಅಧ್ಯಕ್ಷ ಪಟ್ಟದ ಪ್ರಬಲ ಆಕಾಂಕ್ಷಿಯಾಗಿದ್ದರು. ಅಲ್ಲದೆ, ಈ ನಿಟ್ಟಿನಲ್ಲಿ ಹೈಕಮಾಂಡ್ ಗೆ ಸಾಕಷ್ಟು ಒತ್ತಡ ಹಾಕಿದ್ದರು. ಆದರೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೈಕಮಾಂಡ್ ಮುಂದೆ ಲಾಬಿ ನಡೆಸಿ, ತನ್ನ ಆಪ್ತನಿಗೆ ಅಧ್ಯಕ್ಷ ಪಟ್ಟ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಕೃಷ್ಣಮೂರ್ತಿ ಆಚಾರ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಕನ್ನರ್ಪಾಡಿಯ ಇತಿಹಾಸ ಪ್ರಸಿದ್ಧ ದೇವಸ್ಥಾನದ ವ್ಯವಸ್ಥಾಪನಾ ಅಧ್ಯಕ್ಷರಾಗಿರುವ ಕೃಷ್ಣಮೂರ್ತಿ ಆಚಾರ್ಯ, ಆಟೊ ಚಾಲಕರ-ಮಾಲೀಕರ ಸಂಘದ ಗೌರವಾಧ್ಯಕ್ಷ ಸಹಿತ ಹಲವು ಸಂಘ ಸಂಸ್ಥೆಗಳಲ್ಲಿ ನಾಯಕತ್ವ ವಹಿಸಿಕೊಂಡಿದ್ದಾರೆ. ಅಲ್ಲದೆ, ಸಾಕಷ್ಟು ಬಡವರಿಗೆ, ದುರ್ಬಲರಿಗೆ, ಕೂಲಿ ಕಾರ್ಮಿಕರಿಗೆ ನೆರವು ನೀಡಿದ್ದಾರೆ.
ಕಳೆದ ಚುನಾವಣೆಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಕೃಷ್ಣಮೂರ್ತಿ ಆಚಾರ್ಯ ಯುವಕರ ಮೆಚ್ಚಿನ ನಾಯಕರಾಗಿ ಹೊರಹೊಮ್ಮಿದ್ದರು. ಪಕ್ಷದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಅವರ ಮನಸ್ಸನ್ನು ಗೆದ್ದಿದ್ದರು. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಉಡುಪಿ, ಕಾಪು ಕ್ಷೇತ್ರದಾದ್ಯಂತ ತಮ್ಮದೇ ತಂಡ ರಚಿಸಿ ಹಲವಾರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದರು.
ಕೃಷ್ಣಮೂರ್ತಿ ಅವರಿಗೆ ಅಧ್ಯಕ್ಷ ಪಟ್ಟ ಕೈತಪ್ಪಿರುವುದು ಬೆಂಬಲಿಗರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಪಕ್ಷದ ನಿರ್ಧಾರದ ವಿರುದ್ಧ ಬೆಂಬಲಿಗರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷದ ನಾಯಕರ ವಿರುದ್ಧ ಸಿಡಿದೆದಿದ್ದಾರೆ.
ರಾಜೀನಾಮೆಗೆ ನಿರ್ಧಾರ?:
ಪಕ್ಷ ಹಾಗೂ ನಾಯಕರ ನಡೆಗೆ ಬೇಸತ್ತು ಕೃಷ್ಣಮೂರ್ತಿ ಅಚಾರ್ಯ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಅಲ್ಲದೆ, ಅವರೊಂದಿಗೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಈ ನಿರ್ಧಾರದಿಂದ ಬೇಸತ್ತು ರಾಜಿನಾಮೆ ಸಲ್ಲಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ ನ ಎನ್ಎಸ್ಐಯು, ಡಿಕೆಶಿ ಅಭಿಮಾನಿ ಬಳಗ, ರಾಹುಲ್ ಬ್ರಿಗೇಡ್, ಗ್ರಾಮ ಪಂಚಾಯತ್ ಸದಸ್ಯರು ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.