ಮನದಲ್ಲೇ ಮುಚ್ಚಿಕೊಂಡೆಯಾ ವಿಧಿಯ ಮಾತು?

ಸುಂದರವಾದ ಪ್ರಾಥಮಿಕ ಶಾಲಾ ದಿನಗಳನ್ನು ಮುಗಿಸಿ ಪ್ರೌಢಶಾಲೆಗೆ ಹೆಜ್ಜೆ ಹಾಕಿದ್ದೆ. ಎಂಟನೆಯ ತರಗತಿಗೆ ದಾಖಲಾತಿಯಾಗಿ ಹೊಸ ಹೊಸ ಗೆಳೆಯರ ಪರಿಚಯವಾಗಿ ಅವರೊಂದಿಗೆ ಆಟ ಮತ್ತು ಪಾಠದಲ್ಲಿ ತೊಡಗಿಸಿಕೊಂಡಿದ್ದೆ. ಸಮಯದ ಓಟ ಅದಾಗಲೇ ಮುಂದೆ ಸಾಗಿತ್ತು. ಮಧ್ಯವಧಿ ಪರೀಕ್ಷೆ ಮುಗಿಸಿ, ರಜಾದಿನಗಳೂ ಮುಗಿದು, ಮತ್ತೆ ತರಗತಿ ಪ್ರಾರಂಭವಾದವು.
ಬಹಳ ಆತ್ಮೀಯತೆಯ ಸ್ವಭಾವ ನನ್ನದು. ಹಾಸ್ಯಮಯ ಮಾತುಗಳನ್ನೇ ಜಾಸ್ತಿ ಮಾತಾಡುತ್ತಿದ್ದುದರಿಂದ ಎಲ್ಲರಿಗೂ ನಾನೆಂದರೆ ಅಚ್ಚು ಮೆಚ್ಚು, ಹೀಗೆ ದಿನ ಕಳೆಯುತ್ತಿರುವಾಗಲೇ ನನಗೊಂದು ಗೆಳತಿಯ ಪರಿಚಯವಾಗಿತ್ತು.

ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದ ಆಕೆಗೆ ನನ್ನ ಹಾಸ್ಯಮಯ ಮಾತುಗಳೆಂದರೆ ತುಂಬಾ ಇಷ್ಟವಾಗಿತ್ತು. ಮತ್ತು ನಾನೆಂದರೆ ತುಂಬಾ ಪ್ರೀತಿ-ವಿಶ್ವಾಸ ಆಕೆಗೆ. ಒಂದು ರೀತಿಯ ಅಕ್ಕ-ತಮ್ಮನ ಸಂಬಂಧ ನಮ್ಮಲ್ಲಿ‌ ಬೆಳೆದು ಬಿಟ್ಟಿತ್ತು. ಬೇರೆ ತಾಯಿಯ ಮಕ್ಕಳಾದರೂ ಒಂದೇ ತಾಯಿಯ ಮಕ್ಕಳ ಹಾಗೆ ಇದ್ದೆವು. ಆಕೆ ಕಾಲೇಜಿಗೆ ಬರುವಾಗ “ಮೆಕ್ಅಪ್” ಮಾಡಿಕೊಂಡು ಬರುತ್ತಿದ್ದರು. ಅವರಿಗೆ ಹಾಸ್ಯಮಯವಾಗಿ ನಾನು, ಮೇಕಪ್ಮಾಡಬಾರದು ಎಂದಾಗಲೆಲ್ಲ, “ನಾನು ಈಗ ಮಾಡದೇ ಇನ್ಯಾವಾಗ ಮಾಡುವುದು ಹೇಳು?” ಎನ್ನುತಿದ್ದರು. ಆದರೆ ಅವರ ಮನದಲ್ಲಿದ್ದ ವಿಚಾರ ನನಗೆ ತಿಳಿಸಿರಲಿಲ್ಲ. ಒಂದು ದಿನ ನನ್ನ ಜೀವನದ ಕರಾಳ ದಿನ. ನನ್ನ ಆ ಗೆಳತಿಯ “ಸಾವು”. ಬಾರದ ಲೊಕಕ್ಕೆ ನನ್ನ ಗೆಳತಿ ಪ್ರಯಾಣ ಬೆಳೆಸಿದ್ದಳು. ಅವರಿಗೆ “ಬ್ಲಡ್ಕ್ಯಾನ್ಸರ್”ಇರುವ ವಿಷಯ ನನಗೆ ತಿಳಿದಿರಲಿಲ್ಲ.
ವಿಧಿಯ ಮಾತನ್ನು ಮನದಲ್ಲೆ ಮುಚ್ಚಿ ಕೊಂಡಿದ್ದಳು ನನ್ನ ಗೆಳತಿ. ದುರಾದೃಷ್ಟವಶಾತ್ ಇಂದು ಅವರು ನನ್ನೊಂದಿಗಿಲ್ಲ, ಆದರೆ ಅವರ ಜೊತೆಗಿದ್ದ ಆ‌ ನೆನಪುಗಳು ಎಂದಿಗೂ ಅಮರ. ಬದುಕಲ್ಲಿ ಸ್ವಲ್ಪ ದಿನ ಆದರೂ ಖುಷಿಯಿಂದ ಬದುಕಿದ ಅವರ ಬದುಕು ಈಗಲೂ ನೆನಪಾಗಿ ಕಣ್ಣೀರಿಡುತ್ತೇನೆ.

-ಮಹಮ್ಮದ್ ಅಲ್ಫಾಜ್
ಪತ್ರಿಕೊದ್ಯಮ ವಿಭಾಗ
ಎಂ.ಪಿ.ಎಂ. ಸರ್ಕಾರಿ ಕಾಲೇಜು
ಕಾರ್ಕಳ.