ಬೆಳ್ಮಣ್: ಯುವ ಜನಾಂಗ ಟ್ರೋಲ್ ಮೊಡೆಲ್ಗಳಾಗದೆ ರೋಲ್ ಮೋಡೆಲ್ಗಳಾಗಬೇಕು. ಸಂಸ್ಕಾರಯುತ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮಾದರಿಯಾಗಬೇಕೆಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಸಚ್ಚೇರಿಪೇಟೆಯ ಸಮರ್ಪಿತಾ ಬಳಗ ಗಾಂದಡ್ಪು ಇದರ ಆಶ್ರಯದಲ್ಲಿ ಜೆಸಿಐ ಮುಂಡ್ಕೂರು ಭಾರ್ಗವ ಹಾಗೂ ಸೇವಾ ಭಾರತಿ ಮುಂಡ್ಕೂರು ಇವರ ಸಹಯೋಗದಲ್ಲಿ ವೆನ್ಲಾಕ್ ಆಸ್ಪತ್ರೆಯ ರಕ್ತಪೂರಣ ಕೇಂದ್ರದ ನೇತೃತ್ವದಲ್ಲಿ ಸಚ್ಚೇರಿಪೇಟೆಯ ಪೊಸ್ರಲ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಯುವಕರು ದುಶ್ಚಟಗಳಿಗೆ ಬಲಿಯಾಗಿ ತಮ್ಮ ಅಮೂಲ್ಯವಾದ ರಕ್ತವನ್ನು ರಸ್ತೆಗೆ ಹಾಕದೆ ಮತ್ತೊಬ್ಬರ ಜೀವವನ್ನು ಉಳಿಸುವಂತಹ ಇಂತಹ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಆದರ್ಶ ವ್ಯಕ್ತಿಗಳಾಗಿ ಎಂದು ಸ್ವಾಮೀಜಿಯವರು ಮಾರ್ಮಿಕವಾಗಿ ನುಡಿದರು.
ದ.ಕ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಜೆಸಿಐ ವಲಯ 15ರ ರಕ್ತದಾನ ವಿಭಾಗದ ವಲಯ ಸಂಯೋಜಕರಾದ ಹರೀಶ್ ಕುಲಾಲ್, ವಲಯ ಉಪಾಧ್ಯಕ್ಷರಾದ ಗಿರೀಶ್ ಎಸ್.ಪಿ, ಮುಂಡ್ಕೂರು ಜೆಸಿಐ ಅಧ್ಯಕ್ಷ ಪ್ರಶಾಂತ್, ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶರತ್, ಆಸ್ಪತ್ರೆಯ ರಕ್ತದಾನ ವಿಭಾಗದ ಮುಖ್ಯಸ್ಥ ಆಂತೊನಿ, ಮುಂಡ್ಕೂರು ಸೇವಾ ಭಾರತಿ ಪ್ರಮುಖ್ ಅರವಿಂದ ಕಾಮತ್, ಸಮರ್ಪಿತ ಬಳಗದ ವೆಂಕಟೇಶ್ ಪೂಜಾರಿ ಉಪಸ್ಥಿತರಿದ್ದರು.
ಸುರೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿ, ಪ್ರತಿಮಾ ಶೆಟ್ಟಿ ವಂದಿಸಿದರು.