ನವದೆಹಲಿ: ಪಂಜಾಬ್ ಕಾಂಗ್ರೆಸ್ನ ಆಂತರಿಕ ಬಿಕ್ಕಟ್ಟು ಶಮನಗೊಳಿಸಲು ಹೈಕಮಾಂಡ್ ಮುಂದಾಗಿದ್ದು, ಅದರಂತೆ ನವಜೋತ್ ಸಿಂಗ್ ಸಿಧು ಅವರಿಗೆ ಪಕ್ಷದ ರಾಜ್ಯ ಘಟಕದ ಚುಕ್ಕಾಣಿ ನೀಡಲು ಹೈಕಮಾಂಡ್ ನಿರ್ಧರಿಸಿದೆ. ಹಾಗೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸಲು ತೀರ್ಮಾನಿಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಪಂಜಾಬ್ ವಿಧಾನಸಭೆ ಸ್ಥಾನಗಳಿಗೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಪಕ್ಷದೊಳಗೆ ಸೃಷ್ಟಿಯಾಗಿರುವ ಬಿಕ್ಕಟ್ಟು ಶಮನಗೊಳಿಸಲು ಕಾಂಗ್ರೆಸ್ ತಿಂಗಳಿಂದ ಹಲವು ಸಭೆಗಳನ್ನು ನಡೆಸಿತ್ತು. ಇತ್ತೀಚೆಗೆ ನವಜೋತ್ ಸಿಂಗ್ ದೆಹಲಿಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಿದ್ದರು. ಅಮರಿಂದರ್ ಸಿಂಗ್ ಅವರು ಸೋನಿಯಾ ಅವರನ್ನು ಭೇಟಿಯಾಗಿ 90 ನಿಮಿಷ ಚರ್ಚಿಸಿದ್ದರು. ಎರಡು ದಿನಗಳ ಹಿಂದೆ ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಸಹ ರಾಹುಲ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಇದೀಗ ಹೈಕಮಾಂಡ್ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಕಳೆದ ನಾಲ್ಕೂವರೆ ವರ್ಷಗಳಿಂದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ನಮ್ಮ ಮುಖ್ಯಮಂತ್ರಿಯಾಗಿದ್ದಾರೆ, ಅವರ ನೇತೃತ್ವದಲ್ಲಿಯೇ ನಾವು ಚುನಾವಣೆ ಎದುರಿಸಲಿದ್ದೇವೆ. ಅಮರಿಂದರ್ ಸಿಂಗ್ ಹಾಗೂ ಸಿಧು ಅವರು ಜೊತೆಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಅಲ್ಲದೆ, ಪಕ್ಷದ ನಿರ್ಧಾರಕ್ಕೆ ಬದ್ಧರಿರುವುದಾಗಿ ಅಮರಿಂದರ್ ಸಿಂಗ್ ಹೇಳಿದ್ದಾರೆ. ಎರಡು–ಮೂರು ದಿನಗಳಲ್ಲಿ ಪಕ್ಷದ ನಿರ್ಧಾರ ಹೊರಬರಲಿದೆ ಎಂದು ರಾಜ್ಯ ಉಸ್ತುವಾರಿ ಹರೀಶ್ ರಾವತ್ ಹೇಳಿದ್ದಾರೆ.