ಉಡುಪಿ: ಉಡುಪಿ ಕೃಷ್ಣಾಪುರ ಮಠದ ಪರ್ಯಾಯ ಪೂರ್ವಭಾವಿಯಾಗಿ ನಡೆಯುವ 3ನೇ ಕಾರ್ಯಕ್ರಮ ‘ಕಟ್ಟಿಗೆ ಮುಹೂರ್ತ’ ಇಂದು ಬೆಳಿಗ್ಗೆ ಕೃಷ್ಣಮಠದಲ್ಲಿ ನೆರವೇರಿತು.
ಮಠದ ಪುರೋಹಿತರಾದ ಕೆ. ಶ್ರೀನಿವಾಸ ಉಪಾಧ್ಯಾಯ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರಗಿತು. ಮೊದಲು ಮಠದ ಪಟ್ಟದ ದೇವರಾದ ಕಾಳೀಯಮರ್ದನ ಕೃಷ್ಣ ದೇವರಿಗೆ ಹಾಗೂ ನರಸಿಂಹ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ನವಗ್ರಹ ಪೂಜೆ ಸಲ್ಲಿಸಲಾಯಿತು.
ಬಳಿಕ ಕಟ್ಟಿಗೆಗಳನ್ನು ತಲೆಹೊರೆಯಲ್ಲಿ ಹೊತ್ತುಕೊಂಡು ಚಂದ್ರೇಶ್ವರ, ಅನಂತೇಶ್ವರ, ಮಧ್ವಾಚಾರ್ಯರು ಹಾಗೂ ಕೃಷ್ಣ ದೇವರ ದರ್ಶನ ಪಡೆದು ನಂತರ ಮಧ್ವ ಸರೋವರದ ಈಶಾನ್ಯ ಭಾಗದ ಕಟ್ಟೆಯಲ್ಲಿರಿಸಿ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರತೀರ್ಥ ಸ್ವಾಮೀಜಿ, ಕೃಷ್ಣ ಮಠದಲ್ಲಿ ಶ್ರೀ ವಾದಿರಾಜರು ಹಾಕಿಕೊಟ್ಟ ಪೂಜಾಕ್ರಮವೇ ವಿಶಿಷ್ಟವಾಗಿದ್ದು, ದೇವರನ್ನು ಗರ್ಭಗೃಹ ಮಾತ್ರವಲ್ಲದೆ ಪ್ರತೀ ಅಧಿಷ್ಠಾನಗಳಲ್ಲೂ ಆರಾಧಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕಟೀಲು ದೇವಳ ಅರ್ಚಕರಾದ ಅನಂತಪದ್ಮನಾಭ ಅಸ್ರಣ್ಣ, ಹರಿನಾರಾಯಣದಾಸ ಅಸ್ರಣ್ಣ ಮತ್ತು ಕಮಲಾದೇವಿಪ್ರಸಾದ ಅಸ್ರಣ್ಣ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಮೂಡುಬಿದಿರೆ ಉದ್ಯಮಿ ಕೆ. ಶ್ರೀಪತಿ ಭಟ್, ದ.ಕ. ಕಸಾಪ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕೆ.ಭುವನಾಭಿರಾಮ ಉಡುಪ, ಭಾಸ್ಕರ ರಾವ್ ಕಿದಿಯೂರು, ಶಿರೂರು ಮಠದ ದಿವಾನ ಉದಯಕುಮಾರ್ ಸರಳತ್ತಾಯ, ಕೃಷ್ಣ ಆಚಾರ್ಯ, ಹರಿದಾಸ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿದ್ದರು.
ವಿದ್ವಾಂಸ ಬನ್ನಂಜೆ ಗೋಪಾಲಕೃಷ್ಣ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.