ಕಾಪು: ಹುಟ್ಟುಹಬ್ಬ ಆಚರಣೆ ವೇಳೆ ಚೂರಿ ಇರಿದು ಪರಾರಿ

ಕಾಪು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದು ಜೀವ ಬೆದರಿಕೆಯೊಡ್ಡಿದ ಘಟನೆ ಕಾಪು ತಾಲೂಕಿನ ಕೋಟೆ ಗ್ರಾಮದ ಕಜಕೋಡ್ ಎಂಬಲ್ಲಿ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ಶರತ್ ದೇವಾಡಿಗ ಎಂದು ಗುರುತಿಸಲಾಗಿದೆ. ಶರತ್ ಜೂನ್ 22ರಂದು ರಾತ್ರಿ 7.30ರ ಸುಮಾರಿಗೆ ಕಜಕೋಡ್ ಹೊಳೆಯ ಬದಿಯಲ್ಲಿ ಎಂಟು ಮಂದಿ ಸ್ನೇಹಿತ ಜೊತೆಗೂಡಿ ಸುಕೇಶ್ ಮೆಂಡನ್ ಎಂಬ ಸ್ನೇಹಿತನ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದರು.

ಈ ವೇಳೆ ಅಭಿಷೇಕ್ ಎಂಬಾತ ಶರತ್ ನಿಗೆ ಕರೆ ಮಾಡಿದ್ದನು. ಆದರೆ ಶರತ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಕಾರಣ ಕರೆ ಸ್ವೀಕರಿಸಲಿಲ್ಲ. ಅದಾದ ಬಳಿಕ ರಾತ್ರಿ 11 ಗಂಟೆ ಸುಮಾರಿಗೆ ಅಭಿಷೇಕ್‌, ಶರತ್ ಮತ್ತು ಸ್ನೇಹಿತರು ಹುಟ್ಟುಹಬ್ಬ ಆಚರಿಸುತ್ತಿದ್ದ ಸ್ಥಳಕ್ಕೆ ಬಂದು ಕಿರಣ್ ಯಾರು?., ಆತ ಎಲ್ಲಿದ್ದಾನೆ ಎಂದು ಕೇಳಿದ್ದಾನೆ. ಆಗ ಶರತ್ ದೇವಾಡಿಗ ನಮಗೆ ಕಿರಣ್ ಯಾರೆಂದು ಗೊತ್ತಿಲ್ಲ. ನಮ್ಮ ಹತ್ತಿರ ಯಾಕೆ ಕೇಳ್ತೀಯಾ ಎಂದಿದ್ದಾನೆ‌. ಇದರಿಂದ ಇಬ್ಬರ ಮಧ್ಯೆ ಮಾತಿನ ಚಕಮಕಿ ಉಂಟಾಗಿದ್ದು, ಅಭಿಷೇಕ್ ತನ್ನಲ್ಲಿದ್ದ ಚೂರಿಯಿಂದ ಶರತ್ ದೇವಾಡಿಗನಿಗೆ ಇರಿದ್ದಾನೆ.

ತಕ್ಷಣವೇ ಶರತ್ ಸ್ನೇಹಿತರು ಹಲ್ಲೆಯನ್ನು ತಡೆದಿದ್ದಾರೆ. ಬಳಿಕ ಅಭಿಷೇಕ್ ಜೀವ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ. ಗಾಯಗೊಂಡ ಶರತ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.